ವಿವಾಹಪೂರ್ವ ವಿಡಿಯೊಶೂಟ್ ನಲ್ಲೂ ಲಂಚ, ನವ ವಿವಾಹಿತ ಪೊಲೀಸ್ ವಿರುದ್ಧ ಅಧಿಕಾರಿಗಳ ಕೆಂಗಣ್ಣು

‌ತಮ್ಮ ವಿವಾಹಪೂರ್ವ ವಿಡಿಯೊಶೂಟ್ ನಲ್ಲಿ ಲಂಚ ಪಡೆಯುತ್ತಿರುವಂತೆ ಕಾಣಿಸಿಕೊಂಡಿರುವ ರಾಜಸ್ಥಾನದ ಪೊಲೀಸ ಅಧಿಕಾರಿ ಇದೀಗ ಪೇಚಿಗೆ ಸಿಲುಕಿದ್ದಾರೆ.
ವಿವಾಹಪೂರ್ವ ವಿಡಿಯೊಶೂಟ್ ನಲ್ಲಿ ಧನಪತ್
ವಿವಾಹಪೂರ್ವ ವಿಡಿಯೊಶೂಟ್ ನಲ್ಲಿ ಧನಪತ್

ಜೈಪುರ: ‌ತಮ್ಮ ವಿವಾಹಪೂರ್ವ ವಿಡಿಯೊಶೂಟ್ ನಲ್ಲಿ ಲಂಚ ಪಡೆಯುತ್ತಿರುವಂತೆ ಕಾಣಿಸಿಕೊಂಡಿರುವ ರಾಜಸ್ಥಾನದ ಪೊಲೀಸ ಅಧಿಕಾರಿ ಇದೀಗ ಪೇಚಿಗೆ ಸಿಲುಕಿದ್ದಾರೆ.

ಹೌದು.. ಉದಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಧನಪತ್ ತನ್ನದೇ ವಿವಾಹ ಪೂರ್ವ ವಿಡಿಯೋ ಶೂಟ್ ಅನ್ನು ವಿಶೇಷವಾಗಿಸುವ ನಿಟ್ಟಿನಲ್ಲಿ ಎಡವಟ್ಟು ಮಾಡಿಕೊಂಡಿದ್ದು, ತನ್ನ ಭಾವಿ ಪತ್ನಿಯಿಂದಲೇ ಲಂಚ ಪಡೆದು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿ ಧನಪತ್, ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುತ್ತಿದ್ದ ಕಿರಣ್ ಗೆ (ಭಾವಿ ಪತ್ನಿ) ದಂಡ ವಿಧಿಸುತ್ತಾರೆ. ಆಗ ಕಿರಣ್ ಪೊಲೀಸ್ ಅಧಿಕಾರಿಯ ಜೇಬಿನಲ್ಲಿ ದುಡ್ಡು ಇರಿಸಿ ಹೋಗುತ್ತಾರೆ. ಆದರೆ ಆಕೆ ತನ್ನ ಪರ್ಸ್ ಅನ್ನು ತೆಗೆದುಕೊಂಡು ಹೋಗಿರುವುದು ಬಳಿಕ ತಿಳಿಯುತ್ತದೆ. ಅದನ್ನು ವಾಪಸ್ ಪಡೆಯುವ ಸಲುವಾಗಿ ಧನಪತ್ ಪುನಃ ಮಹಿಳೆಯನ್ನು ಭೇಟಿ ಮಾಡುತ್ತಾರೆ. ಇಬ್ಬರೂ ಆಗ ಪರಸ್ಪರ ಪ್ರೀತಿಗೆ ಒಳಗಾಗುತ್ತಾರೆ ಎಂದು ವಿಡಿಯೊದಲ್ಲಿ ಚಿತ್ರಿಸಲಾಗಿದೆ. 

ಇದೇ ವಿಡಿಯೋ ಇದೀಗ ಪೊಲೀಸಪ್ಪನ ಉದ್ಯೋಗಕ್ಕೆ ಕುತ್ತು ತಂದಿದ್ದು, ಧನಪತ್ ವಿರುದ್ಧ ಮೇಲಧಿಕಾರಿ ಕ್ರಮ ಕೈಗೊಳ್ಳಬೇಕೆಂದು, ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಡಾ. ಹವಾ ಸಿಂಗ್ ಘೊಮಾರಿಯಾ ಅವರು  ನೋಟಿಸ್ ನೀಡಿದ್ದಾರೆ.

ಇನ್ನು ಅತ್ತ ಪೊಲೀಸ್ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಯೂಟ್ಯೂಬ್ ನಲ್ಲಿ ಆ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ.

ಮತ್ತೊಬ್ಬ ಪೊಲೀಸ್ ಅಧಿಕಾರಿಯೊಬ್ಬರು ಈ ವಿಡಿಯೊ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ಸಮವಸ್ತ್ರ ದುರ್ಬಳಕೆ ಮಾಡಿಕೊಂಡಿರುವುದರಿಂದ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆಯಾಗಿದೆ. ಸಮವಸ್ತ್ರದ ಘನತೆ ಕಾಪಾಡಿಕೊಳ್ಳಬೇಕು ಹಾಗೂ ವಿವಾಹಪೂರ್ವ ಫೊಟೊ/ವಿಡಿಯೊ ಶೂಟ್ ನಲ್ಲಿ ಸಮವಸ್ತ್ರ ಧರಿಸುವಂತಿಲ್ಲ ಎಂದು ಎಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com