ಮೋದಿಯವರನ್ನು ಟೀಕಿಸುತ್ತಾ ಹೋದರೆ ಅವರಿಗೆ ಮತ ಹಾಕಿದ ಜನರು ಮೂರ್ಖರು ಎಂದ ಹಾಗೆ ಆಗುತ್ತದೆ: ಶಶಿ ತರೂರ್ 

ಕಾಂಗ್ರೆಸ್  ಹಿರಿಯ ಮುಖಂಡ, ಸಂಸದ ಶಶಿ ತರೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಧಾನಿ ಮೋದಿ ಪರ ಹೇಳಿಕೆ ನೀಡಿದ್ದಕ್ಕೆ ವಿವರಣೆ ಕೇಳಿ ಕಾಂಗ್ರೆಸ್ ನಿಂದ ಶಶಿ ತರೂರ್ ಗೆ ನೊಟೀಸ್ ಜಾರಿಯಾಗಿದೆ.  
ಶಶಿ ತರೂರ್
ಶಶಿ ತರೂರ್

ತಿರುವನಂತಪುರಂ: ಕಾಂಗ್ರೆಸ್  ಹಿರಿಯ ಮುಖಂಡ, ಸಂಸದ ಶಶಿ ತರೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಧಾನಿ ಮೋದಿ ಪರ ಹೇಳಿಕೆ ನೀಡಿದ್ದಕ್ಕೆ ವಿವರಣೆ ಕೇಳಿ ಕಾಂಗ್ರೆಸ್ ನಿಂದ ಶಶಿ ತರೂರ್ ಗೆ ನೊಟೀಸ್ ಜಾರಿಯಾಗಿದೆ. 


ಆದರೆ ತರೂರ್ ತಮ್ಮ ಮಾತಿಗೆ ಈಗಲೂ ಬದ್ಧವಾಗಿದ್ದಾರೆ. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ಮತ್ತೆ ಗೆಲುವು ಕಾಣಬೇಕಾದರೆ ತನ್ನ ಕಾರ್ಯತಂತ್ರವನ್ನು ಪುನರುಜ್ಜೀವನಗೊಳಿಸಬೇಕು. ನರೇಂದ್ರ ಮೋದಿ ವಿರುದ್ಧದ ಟೀಕೆಯಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ತೋರಿಸಬೇಕು ಎಂದಿದ್ದಾರೆ.


ತನ್ನ ಟೀಕೆಗಳನ್ನು ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಅಭಿಪ್ರಾಯ ಮೂಡಿಸಬೇಕು. ಮೋದಿಯವರು ಏನೂ ಮಾಡಲಿಲ್ಲ ಎಂದು ಅವರ ಸರ್ಕಾರದ ತಪ್ಪುಗಳನ್ನು ಹೇಳುತ್ತಾ ಹೋದರೆ ಅವರಿಗೆ ಮತ ಹಾಕಿದ ಜನರು ಮೂರ್ಖರು ಎಂದು ನಾವು ಹೇಳಿದ ಹಾಗೆ ಆಗುತ್ತದೆ. ಅದರಿಂದ ಕಾಂಗ್ರೆಸ್ ಜನರ ಮತ ಗಳಿಸಲು ಸಾಧ್ಯವಿಲ್ಲ ಎಂದರು.


''ದ ಪಾರಡಾಕ್ಸಿಕಲ್ ಪ್ರೈಮ್ ಮಿನಿಸ್ಟರ್'' ಎಂದು ಮೋದಿ ಸರ್ಕಾರದ ಬಗ್ಗೆ ನಾನು ಬರೆದ 500 ಪುಟಗಳ ಪುಸ್ತಕದಲ್ಲಿ ಕೆಲವೊಂದು ವಿಷಯಗಳನ್ನು ಹೇಳಿದ್ದೇನೆ. 2014ರಲ್ಲಿ ಅವರಿಗೆ ಶೇಕಡಾ 31ರಷ್ಟು ಮತಗಳು ಸಿಕ್ಕಿದ್ದರೆ ಅದು 2019ರಲ್ಲಿ ಶೇಕಡಾ 37ಕ್ಕೆ ಏರಿಕೆಯಾಗಿತ್ತು. ಮತದಾರರಿಗೆ, ದೇಶಕ್ಕೆ  ಅವರು ಏನಾದರೂ ಮಾಡುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡಿತ್ತು. ನಾವು ವಾಸ್ತವವನ್ನು ಒಪ್ಪಲೇಬೇಕು ಎಂದಿದ್ದಾರೆ.


ಕಾಂಗ್ರೆಸ್ ಒಟ್ಟಾಗಿ ಪ್ರಗತಿಪರ, ಜಾತ್ಯತೀತ ಮತ್ತು ಉದಾರ ಪಕ್ಷವಾಗಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ನಾನು ಬಯಸುತ್ತೇನೆ. ಅದಕ್ಕೆ ಕೇವಲ ಕಾಂಗ್ರೆಸ್ ಬೆಂಬಲಿಗರನ್ನು ಮಾತ್ರ ಆಕರ್ಷಿಸಿದರೆ ಸಾಲದು. ಕಳೆದ ಎರಡು ಲೋಕಸಭಾ ಚುನಾನಣೆಯಲ್ಲಿ ನಮ್ಮನ್ನು ಬಿಟ್ಟು ಬಿಜೆಪಿ ಪರ ಮತ ಹಾಕಿದ ಜನರ ನಂಬಿಕೆ ಗಳಿಸಬೇಕು. ಮೋದಿಯವರನ್ನು ಅವರು ಏನು ಕಂಡು ಆಕರ್ಷಿತರಾಗಿದ್ದಾರೋ ಅಂತಹ ವಿಷಯಗಳ ಬಗ್ಗೆ ನಾವು ಗಮನಹರಿಸಬೇಕು, ಆಗ ನಮ್ಮ ಟೀಕೆಗಳಿಗೆ ಹೆಚ್ಚು ವಿಶ್ವಾಸಾರ್ಹತೆ ಬರುತ್ತದೆ. ನಾನು ಅಷ್ಟೇ ಹೇಳುವುದು ಎಂದು ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com