17 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಆಯೋಗ ಸಿದ್ಧ: ಸಂಜೀವ್ ಕುಮಾರ್

ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ 17 ವಿಧಾನ ಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಸರ್ವ ಸನ್ನದ್ದವಾಗಿದೆ.
17 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಆಯೋಗ ಸಿದ್ಧ: ಸಂಜೀವ್ ಕುಮಾರ್
17 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಆಯೋಗ ಸಿದ್ಧ: ಸಂಜೀವ್ ಕುಮಾರ್

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ 17 ವಿಧಾನ ಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಸರ್ವ ಸನ್ನದ್ದವಾಗಿದೆ, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ನಡೆಸಲು ಸಿದ್ದ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ

ನಗರದ ನಿರ್ವಾಚನಾ ನಿಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹಗೊಂಡಿರುವ ಶಾಸಕರು ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವ ಮಾಹಿತಿ ತಮ್ಮ ಬಳಿ ಇಲ್ಲ. ಉಪ ಚುನಾವಣೆ ನಡೆಸುವ ಸಂಬಂಧ ತಮಗೆ ಮಾಹಿತಿಯೂ ದೊರೆತಿಲ್ಲ. ಇತರ ರಾಜ್ಯಗಳ ವಿಧಾನ ಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ತೆರವಾಗಿರುವ ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗ 2020ರ ವಿಶೇಷ ಮತದಾರರ ನೋಂದಣಿ ಕಾರ್ಯಕ್ರಮವನ್ನು ಭಾನುವಾರ ದಿಂದ ಆರಂಭಿಸಲಿದ್ದು, ಪ್ರತೀ ವರ್ಷ ಮತದಾರರ ಪಟ್ಟಿಯನ್ನು ಸೆಪ್ಟಂಬರ್1ರಿಂದ ಮುಂದಿನ ವರ್ಷದ ನವೆಂಬರ್ 8 ವರೆಗೂ ನೋಂದಣಿ ಮಾಡಲಾಗುವುದು. ಬಳಿಕ ಪಟ್ಟಿಯನ್ನು ಪರಿಷ್ಕರಿಸಿ ಜನವರಿ ಮಾಹೆಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಹೊಸದಾಗಿ 2002ರ ಜನವರಿ 1 ರ ಒಳಗಾಗಿ ಹುಟ್ಟಿದ ಹಾಗೂ 18 ವರ್ಷ ತುಂಬಿರುವವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದು. ಇದರ ಜತೆ ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋದವರು, ವಿಳಾಸ ಬದಲಾವಣೆ, ಬೇರೆಡೆಗೆ ಮತದಾರರ ಹೆಸರು ವರ್ಗಾಯಿಸಲು ಬಯಸುವವರಿಗೂ ಪರಿಷ್ಕರಣೆಯಲ್ಲಿ ಅವಕಾಶ ನೀಡಲಾಗಿದೆ. ಮೃತಪಟ್ಟವರನ್ನು ಸಹ ಪಟ್ಟಿಯಿಂದ ಕೈಬಿಡಲಾಗುವುದು ಎಂದರು. 

ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಮ್ಮ ಸಿಬ್ಬಂದಿ ಮನೆ ಮನೆಗೆ ಭೇಟಿ ಮಾಡಿ ಮಾಹಿತಿ ಪಡೆದು ಪಟ್ಟಿ ಸಿದ್ಧಪಡಿಸುತ್ತಾರೆ. ಲೋಕಸಭಾ ಚುನಾವಣೆ ವೇಳೆ ಹೆಸರು ಪಟ್ಟಿಯಿಂದ ಕೈ ಬಿಟ್ಟು ಹೋಗಿದೆ ಎಂದು ಹಲವರು ಆರೋಪಿಸಿದ್ದರು. ಇದರಿಂದ ನಾಗರಿಕರು ಈಗ ಗಮನ ಹರಿಸಿ ಹಿಂದೆ ಬಿಟ್ಟು ಹೋದ ಹೆಸರನ್ನು ದಾಖಲೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ಮತದಾರರ ನೊಂದಣಿ ಕಾರ್ಯಕ್ರಮದಲ್ಲಿ ರಾಜಕೀಯ ಪಕ್ಷಗಳ ಪಾತ್ರ ಮಹತ್ವದ್ದಾಗಿದೆ. ಈಗಲೇ, ಇಂತಹ ಸುಸಂದರ್ಭಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಮತದಾರರ ಪಟ್ಟಿ ಸರಿಪಡಿಸಿಕೊಳ್ಳಬಹುದು ಎಂದರು. 

 ಚುನಾವಣಾ ಅಧಿಕಾರಿಗಳ ಜೊತೆಗೆ ರಾಜಕೀಯ ಪಕ್ಷಗಳ ಬೂತ್ ಏಜೆಂಟ್ ಗಳನ್ನು ನೇಮಿಸಿದರೆ ಉತ್ತಮ. ಬೂತ್ ಏಜೆಂಟರುಗಳಿಗೆ ಸ್ಥಳೀಯ ಮತದಾರರ ಮಾಹಿತಿ ಸ್ಪಷ್ಟವಾಗಿರುತ್ತದೆ. ಸೇರ್ಪಡೆ ಮತ್ತು ಬದಲಾವಣೆ ವಿಚಾರದಲ್ಲಿ ಹೆಚ್ಚಿನ ಅವಕಾಶ ಇವರಿಗಿರುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಆಗ ಮಾತ್ರ ಎರಡು ಕಡೆಗಳಲ್ಲಿ ದಾಖಲೆ, ನಕಲಿ ಮತದಾರರು, ಅಕ್ರಮ ಮತದಾರರನ್ನು ಪತ್ತೆ ಹೆಚ್ಚಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.

ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಸೇರ್ಪಡೆ ಕುರಿತು ವೇಳಾಪಟ್ಟಿ ಸಿದ್ಧಪಡಿಸಿದ್ದೇವೆ. ಮತದಾರರ ಪಟ್ಟಿ ಪರಿಷ್ಕರಣೆ, ದೃಡೀಕರಣ, ಸ್ವಚ್ಚಗೊಳಿಸುವುದು ಎಂಬ (ಇವಿಪಿ) ಕಾರ್ಯಕ್ರಮ ಮಾಡುತ್ತಿದ್ದೇವೆ. ಅಲ್ಲಿ ಮತದಾರರು ಆನ್ ಲೈನ್ ಮೂಲಕ, ಇಲ್ಲವೇ ನಮ್ಮ ನಾಗರೀಕ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು. ಚುನಾವಣಾ ಸಹಾಯವಾಣಿ 1950 ಗೂ ಕರೆ ಮಾಡಬಹುದು. ನಮ್ಮ ವೆಬ್ ಸೈಟ್ ನಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ಅಳವಡಿಸಲಾಗಿದೆ. ಸಮರ್ಪಕ ಹಾಗೂ ಪಾರದರ್ಶಕ ಮತದಾರರ ಪಟ್ಟಿ ಸಿದ್ಧವಾಗಲಿ ಎಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ. ಈ ಅಭಿಯಾನಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಸದ್ಯ ರಾಜ್ಯದಲ್ಲಿ  5 ಕೋಟಿ 10 ಲಕ್ಷದ 60 ಸಾವಿರ 498 ಮಂದಿ ಮತದಾರರಿದ್ದು ಇದರಲ್ಲಿ  2 ಕೋಟಿ 58 ಲಕ್ಷ 01 ಸಾವಿರದ 694 ಪುರುಷರು, 2 ಕೋಟಿ 52 ಲಕ್ಷದ 54 ಸಾವಿರದ 153 ಮಹಿಳೆಯರು, ಹಾಗೂ 4651 ಇತರೆ ಮತದಾರರಿದ್ದಾರೆ. ಚುನಾವಣಾ ಆಯೋಗದ ನಿಯಮಾವಳಿ ಶೇ 70ರಷ್ಟು ಇರಬೇಕಾದರ ಮತದಾರರ ಪಟ್ಟಿಯಲ್ಲಿ ಶೇ 71.4 ಇದ್ದು, ಹೆಚ್ಚುವರಿ 1.4 ಶೇ ನೋಂದಣಿ ಹೆಚ್ಚಳ ಕಂಡು ಬಂದಿದೆ. ಪುರುಷ ಮತ್ತು ಮಹಿಳೆಯರು ಅನುಪಾತ 979 ಸಾಮಾನ್ಯವಾಗಿ ಕಂಡು ಬಂದಿದೆ.

ನೂತನವಾಗಿ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸುವವರಿಗಾಗಿ ರಾಜ್ಯದಲ್ಲಿರುವ 6151 ನಾಗರೀಕ ಸೇವಾ ಕೇಂದ್ರಗಳು,ಅಟಲ್ ಜೀ ಜನಸ್ನೇಹಿ ಕೇಂದ್ರ ಹಾಗೂ ಬಾಪೂಜಿ ಕೇಂದ್ರಗಳು,ಜಿಲ್ಲಾ ಚುನಾವಣಾಧಿಕಾರಿ ಕಚೇರಿ, ತಾಲೂಕು ಹಾಗೂ ಉಪ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ಬೆಂಗಳೂರು ಒನ್ ಸೇರಿದಂತೆ ರಾಜ್ಯ ಸರ್ಕಾರದ ಇತರ ಏಜೆನ್ಸಿಗಳ ಮೂಲಕವೂ  ಮತದಾರರ ನೋಂದಾಣಿ ಮತ್ತು ಇತರ ಚುನಾವಣಾ ಇಲಾಖೆ ಕೆಲಸಗಳನ್ನು ಕೈಗೊಳ್ಳಬಹುದು ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com