ರಾಜ್ಯಸಭೆಯಲ್ಲೂ ಎಸ್ ಪಿಜಿ ತಿದ್ದುಪಡಿ ಮಸೂದೆ ಅಂಗೀಕಾರ, ಗಾಂಧಿ ಕುಟುಂಬಕ್ಕಿಲ್ಲ ಉನ್ನತ ಭದ್ರತೆ

ವಿಶೇಷ ಭದ್ರತಾ ಪಡೆ(ಎಸ್ ಪಿಜಿ) ತಿದ್ದುಪಡಿ ಮಸೂದೆ 2019 ಮಂಗಳವಾರ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದ್ದು, ಇನ್ನು ಮುಂದೆ ಪ್ರಧಾನಿ ಹಾಗೂ ಅವರ ಅಧಿಕೃತ ನಿವಾಸದಲ್ಲಿ ವಾಸಿಸುವ ಕುಟುಂಬಕ್ಕೆ....
ಗಾಂಧಿ ಕುಟುಂಬ
ಗಾಂಧಿ ಕುಟುಂಬ

ನವದೆಹಲಿ: ವಿಶೇಷ ಭದ್ರತಾ ಪಡೆ(ಎಸ್ ಪಿಜಿ) ತಿದ್ದುಪಡಿ ಮಸೂದೆ 2019 ಮಂಗಳವಾರ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದ್ದು, ಇನ್ನು ಮುಂದೆ ಪ್ರಧಾನಿ ಹಾಗೂ ಅವರ ಅಧಿಕೃತ ನಿವಾಸದಲ್ಲಿ ವಾಸಿಸುವ ಕುಟುಂಬಕ್ಕೆ ಮಾತ್ರ ಉನ್ನತ ಕಮಾಂಡೊಗಳ ಭದ್ರತೆ ಸಿಗಲಿದೆ.

ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಎಸ್ ಪಿಜಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜ್ಯಸಭೆಯಲ್ಲಿ ಮಂಡಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಮಸೂದೆ ಮಂಡಿಸಿ ಮಾತನಾಡಿದ ಅಮಿತ್ ಶಾ, ಭದ್ರತೆ ಪ್ರತಿಷ್ಛೆಯಾಗಬಾರದು. ಎಸ್ ಪಿಜಿ ಭದ್ರತೆಗಾಗಿ ಪಟ್ಟು ಹಿಡಿದಿರುವ ಉದ್ದೇಶವಾದರೂ ಏನು? ಎಸ್ ಪಿಜಿ ಭದ್ರತೆಯನ್ನು ದೇಶದ ಪ್ರಧಾನಿಗೆ ಮಾತ್ರ ನೀಡಲಾಗುತ್ತದೆಯೇ ವಿನಃ ಎಲ್ಲರಿಗೂ ಈ ಸೌಲಭ್ಯ ಒದಗಿಸಲು ಆಗುವುದಿಲ್ಲ ಎಂದು ಹೇಳಿದರು.

ಎಸ್ ಪಿಜಿ ಮಸೂದೆಗೆ ತಿದ್ದುಪಡಿ ತರುತ್ತಿರುವುದು ಇದೇ ಮೊದಲೇನಲ್ಲ. ಇದು ಐದನೇ ತಿದ್ದುಪಡಿ. ಈ ಹಿಂದಿನ ನಾಲ್ಕು ತಿದ್ದುಪಡಿಯನ್ನು ಗಾಂಧಿ ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿತ್ತು. ಆದರೆ, ನಾವು ಗಾಂಧಿ ಕುಟುಂಬವನ್ನು ವಿರೋಧಿಸುತ್ತಿಲ್ಲ. ನಾವು ವಿರೋಧಿಸುತ್ತಿರುವುದು ಕುಟುಂಬ ರಾಜಕಾರಣವನ್ನು ಎಂದು ಅಮಿತ್ ಶಾ ಹೇಳಿದರು.

ಅಮಿತ್ ಶಾ ಉತ್ತರದಿಂದ ಕೆರಳಿ ಕೆಂಡವಾದ ಕಾಂಗ್ರೆಸ್ ಸದಸ್ಯರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಾಜ್ಯಸಭೆ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದರು. ಕಾಂಗ್ರೆಸ್​ ಸಂಸದರು ಹೊರನಡೆದ ಬಳಿಕ ಸದನದಲ್ಲಿ ಉಳಿದವರೆಲ್ಲರೂ ವಿಧೇಯಕದ ಪರವಾಗಿಯೇ ಧ್ವನಿಮತದ ಮೂಲಕ ತಮ್ಮ ಒಪ್ಪಿಗೆ ಸೂಚಿಸಿದರು.

ಇತ್ತೀಚೆಗೆ ಕೇಂದ್ರ ಸರ್ಕಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರಿಗೆ ಸುಮಾರು 3 ದಶಕಗಳಿಂದಿದ್ದ ಎಸ್ ಪಿಜಿ ಕಮಾಂಡೊ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಎಸ್ ಪಿಜಿ ಬದಲು ಝೆಡ್ ಪ್ಲಸ್ ಭದ್ರತೆ ನೀಡುವುದಾಗಿ ಘೋಷಿಸಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ ಸೃಷ್ಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com