ಒಟ್ಟಾಗಿ ಕೆಲಸ ಮಾಡುವ ಮೋದಿ ಪ್ರಸ್ತಾಪ ತಿರಸ್ಕರಿಸಿದೆ: ಸಂಪೂರ್ಣ'ಮಹಾ' ಡ್ರಾಮ ಬಿಚ್ಚಿಟ್ಟ ಪವಾರ್ 

ಮಹಾರಾಷ್ಟ್ರದಲ್ಲಿ ಎನ್ ಸಿಪಿ ಹಾಗೂ ಬಿಜೆಪಿ ಒಟ್ಟಾಗಿ ಕೆಲಸ ಮಾಡುವ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾಗಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್  ಬಹಿರಂಗಪಡಿಸಿದ್ದಾರೆ.
ಶರದ್ ಪವಾರ್
ಶರದ್ ಪವಾರ್

ಮುಂಬೈ: ಮಹಾರಾಷ್ಟ್ರದಲ್ಲಿ ಎನ್ ಸಿಪಿ ಹಾಗೂ ಬಿಜೆಪಿ ಒಟ್ಟಾಗಿ ಕೆಲಸ ಮಾಡುವ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾಗಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್  ಬಹಿರಂಗಪಡಿಸಿದ್ದಾರೆ.

 ಖಾಸಗಿ ಚಾನೆಲ್ ವೊಂದರ ಜೊತೆ ಮಾತನಾಡಿರುವ ಶರದ್ ಪವಾರ್, ಕಳೆದೊಂದು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ನಡೆದ ಸಂಪೂರ್ಣ ರಾಜಕೀಯ ಡ್ರಾಮವನ್ನು  ಬಿಚ್ಚಿಟ್ಟಿದ್ದಾರೆ.

ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದಾಗ ಒಗ್ಗಟ್ಟಾಗಿ ಕೆಲಸ ಮಾಡುವ ಸಲಹೆ ನೀಡಿದರು. ಎನ್ ಸಿಪಿ ಹಾಗೂ ಬಿಜೆಪಿ ಒಟ್ಟಾಗಿ ಕೆಲಸ ಮಾಡಲು ಬಯಸಿದ್ದರು. ಆದಾಗ್ಯೂ, ಈ ಪ್ರಸ್ತಾವವನ್ನು ತಿರಸ್ಕರಿಸಿದೆ ಎಂದು ಮೋದಿ ಜೊತೆಗಿನ ಭೇಟಿ ಬಗ್ಗೆ ಹಿಂದಿದ್ದ ರಹಸ್ಯವನ್ನು ತಿಳಿಸಿದ್ದಾರೆ.

ಮೋದಿ ಸರ್ಕಾರ ತಮ್ಮನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಭರವಸೆ ಇಟ್ಟಿತ್ತು ಎಂಬ ವರದಿಗಳನ್ನು ತಳ್ಳಿ ಹಾಕಿದ ಪವಾರ್,  ಸುಪ್ರಿಯಾ ಸುಳೆ ಅವರಿಗೆ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನದ ಅವಕಾಶ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಎನ್ ಸಿಪಿ ಕಾರ್ಯಕರ್ತರು ಬಿಜೆಪಿ ಜೊತೆಗೆ ಹೋಗಲು ಸಿದ್ಧರಿರಲಿಲ್ಲ. ನಮ್ಮ ಸಿದ್ದಾಂತ ಸಂಪೂರ್ಣ ಭಿನ್ನವಾಗಿದೆ. ಆದಾಗ್ಯೂ, ಒಟ್ಟಾಗಿ ಕೆಲಸ ಮಾಡುವುದು ಅಸಾಧ್ಯ ಎಂದು ಮೋದಿಗೆ ಹೇಳಿದ್ದೆ. ಅಲ್ಲದೇ, ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮೊಂದಿಗೆ ಇರುವುದಾಗಿ ತಿಳಿಸಿದ್ದಾಗಿ ಹೇಳಿದ್ದಾರೆ. 

ಅಜಿತ್ ಪವಾರ್ ಬಂಡಾಯ ಶಾಕ್ ಆಗಿತ್ತು. ಆದರೆ, ಅವರೊಂದಿಗೆ ಹೆಚ್ಚಿನ ಶಾಸಕರು ಇಲ್ಲ ಎಂಬುದು ಕೆಲ ಗಂಟೆಗಳಲ್ಲಿಯೇ ಮನವರಿಕೆಯಾಯಿತು. ಫಡ್ನವೀಸ್ ಜೊತೆಗೆ ಕೈ ಜೋಡಿಸುವ ಚಿಂತನೆಯನ್ನು ಕೈಬಿಡಬೇಕಾಗಿ ಕೇಳಿಕೊಂಡಾಗಿ ಆ ಯೋಚನೆಯಿಂದ ಹೊರಬಂದರು. ಅವರಿಗೆ ಎರಡನೇ ಬಾರಿಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com