ರಾಹುಲ್ ಭಾಷಣವನ್ನು ಮಲಯಾಳಂ ಗೆ ತರ್ಜುಮೆ: ವಿದ್ಯಾರ್ಥಿನಿಗೆ ಪ್ರಶಂಸೆಗಳ ಸುರಿಮಳೆ 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನು ಇಂಗ್ಲೀಷ್ ನಿಂದ ಮಲಯಾಳಂಗೆ ಅನುವಾದ ಮಾಡಿದ ವಿದ್ಯಾರ್ಥಿನಿಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.
ರಾಹುಲ್ ಗಾಂಧಿಯ ಭಾಷಣ ಅನುವಾದ ಮಾಡುತ್ತಿರುವ ಸಫಾಲ್ ಗಾಂಧಿ ಭಾಷಣ
ರಾಹುಲ್ ಗಾಂಧಿಯ ಭಾಷಣ ಅನುವಾದ ಮಾಡುತ್ತಿರುವ ಸಫಾಲ್ ಗಾಂಧಿ ಭಾಷಣ

ಮಲಪ್ಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾಷಣವನ್ನುಇಂಗ್ಲೀಷ್ ನಿಂದ ಮಲಯಾಳಂಗೆ ಅನುವಾದ ಮಾಡಿದ ವಿದ್ಯಾರ್ಥಿನಿಯನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.

 ನಾನು ಇಂಗ್ಲಿಷ್‌ನಲ್ಲಿ ಮಾತನಾಡಲಿದ್ದೇನೆ. ನನ್ನ ಭಾಷಣವನ್ನು ಅನುವಾದ ಮಾಡಲು ಯಾರಾದರೂ ಮುಂದೆ ಬಂದರೆ ಚೆನ್ನಾಗಿರುತ್ತಿತ್ತು. ನಾನು ಹೇಳಿದ್ದನ್ನು ತರ್ಜುಮೆ ಮಾಡಲು ವಿದ್ಯಾರ್ಥಿಗಳು ಯಾರಾದರೂ ಇದ್ದೀರಾ?  ಎಂದು ಕಾಂಗ್ರೆಸ್ ನೇತಾರ, ವಯನಾಡ್ ಸಂಸದ ರಾಹುಲ್ ಗಾಂಧಿ ಕೇಳಿದಾಗ ಸಫಾ ಫೆಬಿನ್ ಎಂಬ ವಿದ್ಯಾರ್ಥಿನಿ ಮುಂದೆ ಬಂದಿದ್ದರು. 

ಮಲಪ್ಪುರಂ ಜಿಲ್ಲೆಯ ಕರುವಾರಕ್ಕುಂಡ್  ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಸೈನ್ಸ್ ಲ್ಯಾಬ್ ಕಟ್ಟಡ ಉದ್ಘಾಟನೆಗಾಗಿ ಗುರುವಾರ ರಾಹುಲ್ ಗಾಂಧಿ ಆಗಮಿಸಿದ್ದರು. ಈ ವೇಳೆ ತನ್ನ ಭಾಷಣ ಅನುವಾದ ಮಾಡಲು ಮುಂದೆ ಬಂದ ವಿದ್ಯಾರ್ಥಿನಿಗೆ ಅಭಿನಂದನೆ ಹೇಳಿ ರಾಹುಲ್ ಭಾಷಣ ಆರಂಭಿಸಿದ್ದರು. 

ಭಾಷಣ ಆರಂಭಕ್ಕೂ ಮುನ್ನ ರಾಹುಲ್‌ ಗಾಂಧಿ ವಿದ್ಯಾರ್ಥಿನಿಯ ಹೆಸರನ್ನು ಕೇಳಿ ತಿಳಿದುಕೊಂಡರು. ಬಳಿಕ ನಿಧಾನವಾಗಿ ಸರಳವಾದ ಭಾಷೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಂತೆಯೇ ಅಷ್ಟೇ ಸರಳವಾಗಿ, ಆದರೆ ಸೂಕ್ತ ಪದಗಳನ್ನು ಆರಿಸಿಕೊಂಡು ಅನುವಾದ ಮಾಡುವ ಮೂಲಕ ಸಫಾ ಎಲ್ಲರ ಚಪ್ಪಾಳೆ ಗಿಟ್ಟಿಸಿ­ಕೊಂಡಳು.

ಸುಮಾರು ಹದಿನೈದು ನಿಮಿಷ­ಗಳ ಕಾಲ ನಡೆದ ನಿರರ್ಗಳ ಅನುವಾದದ ಮಧ್ಯೆ ಎಲ್ಲಿಯೂ ಆಕೆ ತಡವರಿಸಲಿಲ್ಲ. ಆಕೆಯ ಆ ನೈಪುಣ್ಯತೆಗೆ ವೇದಿಕೆ ಮೇಲಿದ್ದ ಗಣ್ಯರು ಮಾತ್ರವಲ್ಲದೆ ಶಾಲೆಯ ಶಿಕ್ಷಕರು, ಸಾರ್ವಜನಿಕರೆಲ್ಲರೂ ಮೆಚ್ಚುಗೆಯ ಮಹಾ­ಪೂರವನ್ನೇ ಹರಿಸಿದರು. ಭಾಷಣದ ಬಳಿಕ ಸಂಸದ ರಾಹುಲ್‌ ಗಾಂಧಿ ಸಫಾಳನ್ನು ಅಭಿನಂದಿಸಿ ಚಾಕೊಲೇಟ್‌ ಅನ್ನು ಉಡುಗೊರೆಯಾಗಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com