ಗಾಂಧಿ ಕುಟುಂಬ ರಕ್ಷಿಸಲು ಡಾ ಸಿಂಗ್ ನಮ್ಮ ತಾತನ ಮೇಲೆ ಆರೋಪ ಮಾಡುತ್ತಿದ್ದಾರೆ: ನರಸಿಂಹ ರಾವ್ ಮೊಮ್ಮಗ 

ಪಿ ವಿ ನರಸಿಂಹ ರಾವ್ ಅವರು ಮನಸ್ಸು ಮಾಡಿದ್ದರೆ 1984ರ ಸಿಖ್ ವಿರೋಧಿ ದಂಗೆಯನ್ನು ತಡೆಯಬಹುದಾಗಿತ್ತು ಎಂದು ಡಾ ಮನಮೋಹನ್ ಸಿಂಗ್ ಹೇಳಿಕೆಗೆ ನರಸಿಂಹ ರಾವ್ ಅವರ ಮೊಮ್ಮಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಡಾ ಮನಮೋಹನ್ ಸಿಂಗ್
ಡಾ ಮನಮೋಹನ್ ಸಿಂಗ್

ಹೈದರಾಬಾದ್: ಪಿ ವಿ ನರಸಿಂಹ ರಾವ್ ಅವರು ಮನಸ್ಸು ಮಾಡಿದ್ದರೆ 1984ರ ಸಿಖ್ ವಿರೋಧಿ ದಂಗೆಯನ್ನು ತಡೆಯಬಹುದಾಗಿತ್ತು ಎಂದು ಡಾ ಮನಮೋಹನ್ ಸಿಂಗ್ ಹೇಳಿಕೆಗೆ ನರಸಿಂಹ ರಾವ್ ಅವರ ಮೊಮ್ಮಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 


ಇಂತಹ ತೀರ್ಮಾನಗಳನ್ನು ಸಚಿವ ಸಂಪುಟ ತೆಗೆದುಕೊಳ್ಳುವುದು ಎಂದು ಮಾಜಿ ಪ್ರಧಾನಿ ಸಿಂಗ್ ಅವರಿಗೆ ಗೊತ್ತಿಲ್ಲವೇ ಎಂದು ಅಂದಿನ ಗೃಹ ಸಚಿವ ಪಿ ವಿ ನರಸಿಂಹ ರಾವ್ ಅವರ ಮೊಮ್ಮಗ ಎನ್ ವಿ ಸುಭಾಷ್ ಕೇಳಿದ್ದಾರೆ. ಗೃಹ ಸಚಿವರೊಬ್ಬರೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸೇನೆಯನ್ನು ಕಾರ್ಯಾಚರಣೆಗಿಳಿಸುವುದು ಇಡೀ ಸಚಿವ ಸಂಪುಟ ತೆಗೆದುಕೊಳ್ಳುವ ತೀರ್ಮಾನವಲ್ಲವೇ ಎಂದು ಬಿಜೆಪಿ ನಾಯಕ, ತೆಲಂಗಾಣದ ಬಿಜೆಪಿ ವಕ್ತಾರರಾಗಿರುವ ಎನ್ ವಿ ಸುಭಾಷ್ ಕೇಳಿದ್ದಾರೆ.


ಅಂದು ಪ್ರಧಾನ ಮಂತ್ರಿ ಕಾರ್ಯಾಲಯವೇ ಸಂಪೂರ್ಣವಾಗಿ ವಿಷಯವನ್ನು ತನ್ನ ಹಿಡಿತದಲ್ಲಿಟ್ಟಿದ್ದರಿಂದ ಗೃಹ ಸಚಿವರು ಸ್ವತಂತ್ರವಾಗಿ ಸಲಹೆ ನೀಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಮನಮೋಹನ್ ಸಿಂಗ್ ಅವರಿಗೆ ಗೊತ್ತಿರಬೇಕು. ಅಂದಿನ ಪರಿಸ್ಥಿತಿಯಲ್ಲಿ ಪ್ರಧಾನ ಮಂತ್ರಿ ಕಚೇರಿಗೆ ವಾಸ್ತವ ಪರಿಸ್ಥಿತಿಯನ್ನು ವಿವರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬಹುದಾಗಿತ್ತು, ಅದನ್ನು ತಮ್ಮ ತಾತ ಮಾಡಿದ್ದರು ಎಂದರು.


1984ರ ಸಿಖ್ ವಿರೋಧಿ ದಂಗೆಗೆ ಡಾ ಮನಮೋಹನ್ ಸಿಂಗ್ ಅವರ ವಿರೋಧವಿದ್ದಿದ್ದರೆ ಅವರು ಪ್ರತಿಭಟನೆ ಮಾಡಬೇಕಾಗಿತ್ತು. ಅದು ಬಿಟ್ಟು ನಂತರ ಪಿ ವಿ ನರಸಿಂಹ ರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಏಕೆ ಸೇರ್ಪಡೆಯಾದರು, ಇಂದು ಅವರೇಕೆ ತಾತನ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಕೇಳಿದರು.


ಸಿಖ್ ವಿರೋಧಿ ದಂಗೆಗೆ ಅಂದು ಮಾತನಾಡದಿದ್ದ ಮನಮೋಹನ್ ಸಿಂಗ್ ನಂತರ 2005ರಲ್ಲಿ ಕ್ಷಮೆ ಕೇಳಿದರು, ನರಸಿಂಹ ರಾವ್ ಅವರ ಮೇಲೆ ಆರೋಪ ಹೊರಿಸಿ ಗಾಂಧಿ ಕುಟುಂಬವನ್ನು ಓಲೈಸಲು ಮನಮೋಹನ್ ಸಿಂಗ್ ಮಾಡುತ್ತಿರುವ ಪೂರ್ವ ಯೋಜಿತ ಸಂಚು ಇದಷ್ಟೇ ಎಂದು ಸುಭಾಷ್ ಆರೋಪಿಸಿದರು.


ಈ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರ ಬುದ್ದಿವಂತಿಕೆಗೆ ವಿಷಯವನ್ನು ಬಿಟ್ಟುಬಿಡುತ್ತೇನೆ. ಮನಮೋಹನ್ ಸಿಂಗ್ ಅವರು ಈಗಾಗಲೇ ಸಾಕಷ್ಟು ಬಾರಿ ಭಾರತವನ್ನು ನಾಚಿಕೆಗೀಡಿನ ಪರಿಸ್ಥಿತಿಗೆ ಒಡ್ಡಿದ್ದಾರೆ ಎಂದರು.


1984ರ ಅಕ್ಟೋಬರ್ 31ರಂದು ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಸಿಖ್ ವಿರೋಧಿ ದಂಗೆಯನ್ನು ಹತ್ತಿಕ್ಕಲು ಸೇನೆಯನ್ನು ಕಾರ್ಯಾಚರಣೆಗಿಳಿಸಲು ಅಂದಿನ ಪ್ರಧಾನಿ ಐ ಕೆ ಗುಜ್ರಾಲ್ ಅವರು ಹೇಳಿದ್ದರೂ ಗೃಹ ಸಚಿವರಾಗಿದ್ದ ಪಿ ವಿ ನರಸಿಂಹ ರಾವ್ ಮನಸ್ಸು ತೋರಲಿಲ್ಲ ಎಂದು ಇತ್ತೀಚೆಗೆ ಡಾ ಮನಮೋಹನ್ ಸಿಂಗ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com