ಉನ್ನಾವೋ ಅತ್ಯಾಚಾರ ಪ್ರಕರಣ: ವಿಧಾನ ಭವನದ ಮುಂದೆ ಅಖಿಲೇಶ್ ಯಾದವ್ ಧರಣಿ

ಉನ್ನಾವೋ ಅತ್ಯಾಚಾರದ ಆರೋಪಿಗಳನ್ನು ಸಹ ಹೈದರಾಬಾದ್ ಎನ್ ಕೌಂಟರ್ ಮಾದರಿಯಲ್ಲೇ ಗುಂಡಿಟ್ಟು ಹತ್ಯೆ ಮಾಡಬೇಕು ಎಂಬ ಆಕ್ರೋಶ, ಕೂಗು ಎಲ್ಲ ಕಡೆ ವ್ಯಕ್ತವಾಗುತ್ತಿದ್ದು, ಉನ್ನಾವೋ ಅತ್ಯಾಚಾರ ಪ್ರಕರಣದ...
ಅಖಿಲೇಶ್ ಯಾದವ್ ಹಾಗೂ ಎಸ್ ಪಿ ಮುಖಂಡರ ಧರಣಿ
ಅಖಿಲೇಶ್ ಯಾದವ್ ಹಾಗೂ ಎಸ್ ಪಿ ಮುಖಂಡರ ಧರಣಿ

ಲಖನೌ: ಉನ್ನಾವೋ ಅತ್ಯಾಚಾರದ ಆರೋಪಿಗಳನ್ನು ಸಹ ಹೈದರಾಬಾದ್ ಎನ್ ಕೌಂಟರ್ ಮಾದರಿಯಲ್ಲೇ ಗುಂಡಿಟ್ಟು ಹತ್ಯೆ ಮಾಡಬೇಕು ಎಂಬ ಆಕ್ರೋಶ, ಕೂಗು ಎಲ್ಲ ಕಡೆ ವ್ಯಕ್ತವಾಗುತ್ತಿದ್ದು, ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಾವಿಗೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವೇ ಕಾರಣ ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಮಹಿಳೆಯರ ಮೇಲೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಮುಖ್ಯಮಂತ್ರಿ ಯೋಗಿ ನೇತೃತ್ವದ ಸರ್ಕಾರ ಅಪರಾಧ ತಡೆಯಲು ವಿಫಲವಾಗಿದೆ.  ಹೀಗಾಗಿ ಯೋಗಿ  ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಖಿಲೇಶ್ ಯಾದವ್ ಅವರು ವಿಧಾನ ಭವನದ ಮುಂದೆ ಧರಣಿ ನಡೆಸುತ್ತಿದ್ದಾರೆ.

ಇದೊಂದು ಕರಾಳ ದಿನ ಎಂದಿರುವ ಅಖಿಲೇಶ್ ಯಾದವ್ ಅವರು, ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದರೆ ಮುಖ್ಯಮಂತ್ರಿ, ರಾಜ್ಯ ಗೃಹ ಸಚಿವ ಹಾಗೂ ಡಿಜಿಪಿ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ನ್ಯಾಯ ಸಿಕ್ಕಂತೆ ಆಗುವುದಿಲ್ಲ. ರಾಜೀನಾಮೆ ಕೊಡದಿದ್ದಲ್ಲಿ ಉನ್ನಾವ್ ಪ್ರಕರಣದ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಯಲ್ಲಿಯೂ ಶೋಕ ಸಭೆ ನಡೆಸಲಾಗುವುದು ಎಂದು ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದು ಈ ಸರ್ಕಾರದಲ್ಲಿ ನಡೆಯುತ್ತಿರುವ ಮೊದಲ ಪ್ರಕರಣ ಅಲ್ಲ. ಈ ಹಿಂದೆಯೇ ಈ ರೀತಿಯ ಹಲವು ಪ್ರಕರಣಗಳು ನಡೆದಿವೆ. ಒಬ್ಬ ಸಂತ್ರಸ್ತೆ ನ್ಯಾಯಕ್ಕಾಗಿ ಮುಖ್ಯಮಂತ್ರಿಗಳ ಮನೆಯ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಮತ್ತು ಉನ್ನಾವೋ ಸಂತ್ರಸ್ತೆ ನ್ಯಾಯಕ್ಕಾಗಿ ತನ್ನ ಇಡೀ ಕುಟುಂಬ ಕಳೆದುಕೊಂಡಿದ್ದನ್ನು ನೀವು ನೆನಪಿಸಿಕೊಳ್ಳಿ. ಇದಕ್ಕೆಲ್ಲ ಬಿಜೆಪಿ ಸರ್ಕಾರವೇ ಹೊಣೆ ಎಂದು ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದರು.

ದುಷ್ಕರ್ಮಿಗಳು ಪೆಟ್ರೋಲ ಸುರಿದು ಹಚ್ಚಿದ ಬೆಂಕಿಯಲ್ಲಿ ಬೆಂದು ಹೋಗಿದ್ದ ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹೃದಯಾಘಾತಕ್ಕೊಳಗಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ನ್ಯಾಯಾಲಯಕ್ಕೆ ಹೋಗುವ ಹಾದಿಯಲ್ಲಿ ಆಕೆಯ ಮೇಲೆ ಆರೋಪಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com