ಹೈದರಾಬಾದ್ ರೀತಿ ನಮಗೂ ನ್ಯಾಯ ಒದಗಿಸಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆ ಆಗ್ರಹ

ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿದ ಕೀಚಕರ ಸಂಹಾರದಂತೆಯೇ ನನ್ನ ಮಗಳ ಮೇಲೆ ಅಟ್ಟಹಾಸ ಮೆರೆದ ಕಾಮುಕರನ್ನೂ ಸಂಹಾರ ಮಾಡಿ ಎಂದು ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆ ಆಗ್ರಹಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಖನೌ: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿದ ಕೀಚಕರ ಸಂಹಾರದಂತೆಯೇ ನನ್ನ ಮಗಳ ಮೇಲೆ ಅಟ್ಟಹಾಸ ಮೆರೆದ ಕಾಮುಕರನ್ನೂ ಸಂಹಾರ ಮಾಡಿ ಎಂದು ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆ ಆಗ್ರಹಿಸಿದ್ದಾರೆ. 

ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಐದು ಮಂದಿ ಕಾಮುಕರು ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದರು. ವಿಚಾರಣೆಗೆಂದು ನ್ಯಾಯಾಲಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ್ದರು. ಶೇ.90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಕೊನೆಯುಸಿರೆಳೆದಿದ್ದಾಳೆ. 

ಹೈದರಾಬಾದ್ ಅತ್ಯಾಚಾರ ಪ್ರಕರಣದಂತೆಯೇ ನನ್ನ ಮಗಳ ಪ್ರಕರಣದಲ್ಲೂ ಕಾಮುಕರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತ್ವರಿತಗತಿಯಲ್ಲಿ ನಮಗೆ ನ್ಯಾಯ ಬೇಕು. ಇದರಿಂದ ಇಂತಹ ಘೋರ ಕೃತ್ಯಗಳನ್ನು ಎಸಗುವ, ಜಾಮೀನಿನ ಮೇಲೆ ಹೊರ ಬಂದು ಮತ್ತೆ ಅಪರಾಧಗಳಲ್ಲಿ ಭಾಗಿಯಾಗುವ ಶಿವಂ ತ್ರಿವೇದಿಯಂತಹ ಆರೋಪಿಗಳಿಗೆ ಭೀತಿ ಹುಟ್ಟಬೇಕೆಂದು ಸಂತ್ರಸ್ತೆ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಗಳ ಆರೋಗ್ಯದ ಕುರಿತು ಮಾಹಿತಿ ಪಡೆಯುವ ಸಲುವಾಗಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮೊಬೈಲ್ ಆನ್ ಮಾಡಿದ್ದೆ. ಈ ವೇಳೆ ಹೈದರಾಬಾದ್ ನಲ್ಲಿ ಅತ್ಯಾಚಾರಿಗಳನ್ನು ಎನ್'ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ತಿಳಿಯಿತು. ಎನ್'ಕೌಂಟರ್ ಮಾಹಿತಿ ತಿಳಿಯುತ್ತಿದ್ದಂತೆಯೇ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸಂಭ್ರಮಿಸಲೇಬೇಕು. ಇದೇ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಂಡರೆ, ಮುಂದೆ ನಮ್ಮ ಸಹೋದರಿಯರು ಹಾಗೂ ಮಕ್ಕಳ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಿ. 

ಹೈದರಾಬಾದ್ ಪ್ರಕರಣ ಉದಾಹರಣೆಯಾಗಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ. ನನ್ನ ಮಗಳಿಗೆ ನ್ಯಾಯ ಒದಗಿಸಲು ಈಗಲೂ ನಾನು ಪ್ರತೀ ಕಚೇರಿ, ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅಲೆಯುತ್ತಲೇ ಇದ್ದೇನೆ. ನ್ಯಾಯ ಪ್ರಕ್ರಿಯೆ ಏಕೆ ಇಷ್ಟೊಂದು ದೊಡ್ಡದು? ಇಂತಹ ಪ್ರಕರಣಗಳಿಗೆ ಪೊಲೀಸರು ಗಡುವು ನೀಡಬೇಕು. ಚಾರ್ಜ್ ಶೀಟ್ ಶೀಘ್ರಗತಿಯಲ್ಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com