ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದು: ಪೊಲೀಸರು, ಪ್ರಧಾನಿಯಿಂದ ಪರಿಹಾರ

ದೆಹಲಿಯಲ್ಲಿ ಭಾನುವಾರ ಬೆಳಗ್ಗೆ ನಡೆದ ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಅಗ್ನಿ ಅವಘಡ
ದೆಹಲಿ ಅಗ್ನಿ ಅವಘಡ

ನವದೆಹಲಿ: ದೆಹಲಿಯಲ್ಲಿ ಭಾನುವಾರ ಬೆಳಗ್ಗೆ ನಡೆದ ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


ಉತ್ತರ ದೆಹಲಿಯ ಅನಜ್ ಮಂಡಿ ಪ್ರದೇಶದಲ್ಲಿ ಕಾರ್ಖಾನೆಯಲ್ಲಿ ಇಂದು ನಸುಕಿನ ಜಾವ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ 43 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ದೆಹಲಿ ಪೊಲೀಸರು ದೃಢಪಡಿಸಿದ್ದಾರೆ.


ಶಾಲಾ ಬ್ಯಾಗು, ಪ್ಲಾಸ್ಟಿಕ್ ಬಾಟಲ್ ಗಳನ್ನು ತಯಾರಿಸುವ ಕಾರ್ಖಾನೆಯಾಗಿರುವುದರಿಂದ ಬೆಂಕಿ ಹತ್ತಿಕೊಂಡಾಗ ವಸ್ತುಗಳಿಂದ ಹೊಗೆ ತುಂಬಿ ಉಸಿರುಗಟ್ಟಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಸಾಯಲು ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗಾಯಗೊಂಡವರನ್ನು ಎಲ್ ಎನ್ ಜೆಪಿ ಮತ್ತು ಲೇಡಿ ಹರ್ದಿಂಜ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ನಡೆಸಲು ಅಪರಾಧ ವಿಭಾಗ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ ಸ್ಥಳಕ್ಕೆ ಆಗಮಿಸಿದೆ.


ರಕ್ಷಣಾ ಕಾರ್ಯ ನಡೆಸುತ್ತಿರುವಾಗ ಇಬ್ಬರು ಪೊಲೀಸರು ಮತ್ತು ಇಬ್ಬರು ಅಗ್ನಿಶಾಮಕ ಸಿಬ್ಬಂದಿಗೆ ಸಹ ಗಾಯವಾಗಿದೆ. ಕಟ್ಟಡ ಮಾಲೀಕ ರೆಹಾನ್ ವಿರುದ್ಧ ಸೆಕ್ಷನ್ 304ರಡಿ ಕೇಸು ದಾಖಲಿಸಲಾಗಿದ್ದು ಘಟನೆ ನಡೆದ ಬಳಿಕ ಅವರು ತಪ್ಪಿಸಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಪೂರ್ವ ಡಿಸಿಪಿ ಮೊನಿಕಾ ಭಾರದ್ವಾಜ್ ತಿಳಿಸಿದ್ದಾರೆ.


ಪ್ರಧಾನಿಯಿಂದ ಪರಿಹಾರ ಘೋಷಣೆ: ಪ್ರಾಣ ಕಳೆದುಕೊಂಡ ಕಾರ್ಮಿಕರ ಕುಟುಂಬಸ್ಥರಿಗೆ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ಸಹ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. 


ಇಂದು ನಸುಕಿನ ಜಾವ ಸಂಭವಿಸಿದ ಅಗ್ನಿ ದುರಂತದ ವೇಳೆ ಕಾರ್ಖಾನೆಯೊಳಗಿದ್ದ 62 ಮಂದಿಯಲ್ಲಿ ಹಲವರನ್ನು ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ. 


34 ಮಂದಿ ಅಸುನೀಗಿದ್ದಾರೆ ಎಂದು ದೆಹಲಿಯ ಲೋಕ ನಾಯಕ ಆಸ್ಪತ್ರೆ ಮತ್ತು 9 ಮಂದಿ ಅಸುನೀಗಿದ್ದಾರೆ ಎಂದು ಲೇಡಿ ಹರ್ದಿಂಗ್ ಆಸ್ಪತ್ರೆ ಖಚಿತಪಡಿಸಿದೆ.


ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು: ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ತಕ್ಷಣಕ್ಕೆ ಕಂಡುಬರುತ್ತಿದ್ದು, ನಿಖರ ಕಾರಣ ತಿಳಿದುಬರಲು ತನಿಖೆಯ ಅಗತ್ಯವಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಹ ಹೇಳಿದ್ದಾರೆ.


ತಕ್ಷಣಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದುಬರುತ್ತಿದ್ದು, ಪೂರ್ಣ ತನಿಖೆ ಮುಗಿದ ಮೇಲಷ್ಟೇ ನಿಖರ ಕಾರಣ ಗೊತ್ತಾಗಲಿದೆ ಎಂದು ಪುರಿ ಸುದ್ದಿಗಾರರಿಗೆ ತಿಳಿಸಿದರು. 


ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ಮೃತ ಕಾರ್ಮಿಕರ ಕುಟುಂಬಕ್ಕೆ ಬಿಜೆಪಿ ವತಿಯಿಂದ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 25 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com