ಹೈದರಾಬಾದ್ ಕಾಮುಕರ ಎನ್'ಕೌಂಟರ್: ಸುಪ್ರೀಂಕೋರ್ಟ್'ಗೆ ಅರ್ಜಿ

ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಗುರುವಾರ ಎನ್'ಕೌಂಟರ್ ನಲ್ಲಿ ಬಲಿಯಾದ ಪ್ರಕರಣ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಎನ್'ಕೌಂಟರ್ ವೇಳೆ ಮಾರ್ಗಸೂಚಿ ಪಾಲಿಸದ ಆರೋಪ, ಪೊಲೀಸರ ವಿರುದ್ಧ ತನಿಖೆ ಕೋರಿ 2 ಅರ್ಜಿಗಳ ಸಲ್ಲಿಕೆ


ನವದೆಹಲಿ: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಗುರುವಾರ ಎನ್'ಕೌಂಟರ್ ನಲ್ಲಿ ಬಲಿಯಾದ ಪ್ರಕರಣ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 

ಎನ್'ಕೌಂಟರ್ ಮೇಲೆ ಅನುಮಾನ ವ್ಯಕ್ತಪಡಿಸಿದ ಶನಿವಾರ ಸುಪ್ರೀಂಕೋರ್ಟ್ ನಲ್ಲಿ ಎರಡು ಪ್ರತ್ಯೇತ ಅರ್ಜಿಗಳು ಸಲ್ಲಿಕೆಯಾಗಿವೆ. 

ಎನ್'ಕೌಂಟರ್ ನಡೆಸುವ ವೇಳೆ ಪಾಲಿಸಬೇಕಾದ 16 ಮಾರ್ಗಸೂಚಿಗಳ ಕುರಿತು 2014ರಲ್ಲೇ ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ಹೊರಡಿಸಿದೆ. ಆದರೆ, ಗುರುವಾರ ನಡೆದ ಎನ್'ಕೌಂಟರ್ ವೇಳೆ ಈ ನಿಮಯ ಉಲ್ಲಂಘಿಸಲಾಗಿದೆ. ಹೀಗಾಗಿ ಎನ್'ಕೌಂಟರ್ ನಲ್ಲಿ ಭಾಗಿಯಾದ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ್ ಸೇರಿದಂತೆ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು ಎಂದು ವಕೀಲರಾದ ಜಿ.ಎಸ್.ಮಣಿ ಹಾಗೂ ಪ್ರದೀಪ್ ಕುಮಾರ್ ಯಾದವ್ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಇನ್ನು ವಕೀಲ ಎಂ.ಎನ್.ಶರ್ಮಾ ಸಲ್ಲಿಸಿರುವ ಅರ್ಜಿಯಲ್ಲಿ ಜೀವಿಸುವ ಹಕ್ಕು ಮತ್ತು ನ್ಯಾಯೋಚಿತ ವಿಚಾರಣೆ ಹಕ್ಕನ್ನು ನೀಡುವ ಸಂವಿಧಾನ 21ನೇ ಪರಿಚ್ಛೇದವನ್ನು ಉಲ್ಲಂಘಿಸಿ ಪೊಲೀಸರು ಆರೋಪಿಗಳನ್ನು ಕೊಂದಿದ್ದಾರೆ. ಪ್ರಕರಣದಲ್ಲಿ ಯಾವುದೇ ವಿಚಾರಣೆ ನಡೆಸದೆಯೇ ನಾಲ್ವರು ಆರೋಪಿಗಳನ್ನು ದೋಷಿ ಎಂದು ಹೇಳಲಾಗಿದೆ. ಪೊಲೀಸ್ ವಶದಲ್ಲಿ ನಡೆದ ಕೊಲೆ ಇದಾಗಿದ್ದು, ಎಲ್ಲಾ ಪೊಲೀಸರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಮತ್ತು ಬಲಿಯಾದವರ ಕುಟುಂಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಕೋರಲಾಗಿದೆ.

ನವೆಂಬರ್ 29 ರಂದು ಹತ್ಯೆಯಾಗಿರುವ ಕಾಮುಕರು ಪ್ರಿಯಾಂಕಾ ರೆಡ್ಡಿ ಮೇಲೆ ಅಟ್ಟಹಾಸ ಮೆರೆದಿದ್ದರು. ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದ ನಾಲ್ವರು ಕಾಮುಕರು, ನಂತರ ಆಕೆಯನ್ನು ಹತ್ಯೆ ಮಾಡಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಪ್ರಕರಣ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. 

ಇದರಂತೆ ಗುರುವಾರ ಬೆಳಗಿನ ಜಾವ ತನಿಖೆ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಆರೋಪಿಗಳನ್ನು ಕರೆದುಕೊಂಡು ಹೋಗಿದ್ದು, ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೆ, ಪೊಲೀಸರ ಬಳಿಯಿದ್ದ ಪಿಸ್ತೂಲನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಕಾಮುಕರ ಮೇಲೆ ಎನ್'ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು. ಪೊಲೀಸರ ಈ ಕಾರ್ಯಕ್ಕೆ ದೇಶದಾದ್ಯಂತ ಶ್ಲಾಘನೆಗಳು ವ್ಯಕ್ತವಾಗತೊಡಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com