ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ: ಪರವಾಗಿ ಮತ ಹಾಕಿದ 293 ಸದಸ್ಯರು 

ನಾಗರಿಕ(ತಿದ್ದುಪಡಿ)ಮಸೂದೆಗೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಮಸೂದೆ ಪರವಾಗಿ 293 ಸದಸ್ಯರು ಮತ ಹಾಕಿದರೆ ವಿರುದ್ಧವಾಗಿ 82 ಮತಗಳು ಬಿದ್ದವು.
ಮತ ಹಾಕಿದ ಚಿತ್ರಣ
ಮತ ಹಾಕಿದ ಚಿತ್ರಣ

ನವದೆಹಲಿ:  ಪೌರತ್ವ(ತಿದ್ದುಪಡಿ)ಮಸೂದೆಗೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಮಸೂದೆ ಪರವಾಗಿ 293 ಸದಸ್ಯರು ಮತ ಹಾಕಿದರೆ ವಿರುದ್ಧವಾಗಿ 82 ಮತಗಳು ಬಿದ್ದವು.


ಇಂದು ಬೆಳಗ್ಗೆ ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಈ ಉದ್ದೇಶಿತ ಮಸೂದೆಯನ್ನು ಮಂಡಿಸಿದರು. ಈ ತಿದ್ದುಪಡಿ ಮಸೂದೆ ದೇಶದ ಅಲ್ಪಸಂಖ್ಯಾತರ ವಿರುದ್ಧವಾಗಿ ಶೇಕಡಾ 0.001ರಷ್ಟು ಕೂಡ ಇಲ್ಲ ಎಂದರು.

ಸಚಿವರು ಮಸೂದೆಯನ್ನು ಮಂಡಿಸುತ್ತಿದ್ದಂತೆ ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಉಂಟಾಯಿತು. ಆಗ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ದೇಶಕ್ಕೆ ಸ್ವತಂತ್ರ ಬಂದ ನಂತರ ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸದೇ ಇದ್ದಿದ್ದರೆ ಇಂದು ತಿದ್ದುಪಡಿ ಮಸೂದೆಯ ಅವಶ್ಯಕತೆ ಇರುತ್ತಿರಲಿಲ್ಲ ಎಂದು ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.


ನಮ್ಮ ದೇಶದ ಕಾನೂನಿನ ಪ್ರಕಾರ ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲಿಂರು ನಾಗರಿಕತ್ವಕ್ಕೆ ಅರ್ಜಿ ಹಾಕಿದರೆ ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ಧಾರ್ಮಿಕ ಕಿರುಕುಳ ಅನುಭವಿಸದ ವ್ಯಕ್ತಿ ಈ ತಿದ್ದುಪಡಿಯಿಂದ ಪ್ರಯೋಜನ ಪಡೆಯುವುದಿಲ್ಲ ಎಂದರು.


ಈ ದೇಶದಲ್ಲಿ ಸಿಖ್ಖರು, ಕ್ರಿಸ್ತಿಯನ್ನರು, ಪಾರ್ಸಿಗಳು ಮತ್ತು ಜೈನರ ಮೇಲೆ ತಾರತಮ್ಯ ತೋರಲಾಗುತ್ತಿದೆ. ಇಂತಹ ನಾಗರಿಕರಿಗೆ ಈ ತಿದ್ದುಪಡಿ ಮಸೂದೆಯಿಂದ ನಾಗರಿಕತ್ವ ಸಿಗಲಿದೆ. ಮುಸ್ಲಿಂರ ಹಕ್ಕುಗಳು ಈ ತಿದ್ದುಪಡಿ ಮಸೂದೆ ಕಿತ್ತುಕೊಳ್ಳುತ್ತದೆ ಎನ್ನುವುದು ತಪ್ಪು ಎಂದರು.


 ಪೌರತ್ವ(ತಿದ್ದುಪಡಿ)ಮಸೂದೆ 2019 ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದ ಮುಸ್ಲಿಂತೇರ ನಿರಾಶ್ರಿತರಿಗೆ ಭಾರತೀಯ ನಾಗರಿಕತ್ವ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com