ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಮುಸ್ಲಿಂ ಸಂಘಟನೆಯಿಂದ 'ಸುಪ್ರೀಂ'ಗೆ ಅರ್ಜಿ

ಭಾರಿ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಮುಸ್ಲಿಂ ಸಂಘಟನೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರಿ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿ ಮುಸ್ಲಿಂ ಸಂಘಟನೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.

ಪೌರತ್ವ (ತಿದ್ದುಪಡಿ) ಮಸೂದೆಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿರುವ ಜಮಾತ್ ಉಲೇಮಾ ಎ ಹಿಂದ್, ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದೆ.

ರಾಜ್ಯಸಭೆಯಲ್ಲಿ ಬುಧವಾರ ರಾತ್ರಿ ಮಸೂದೆಗೆ ಅಂಗೀಕಾರ ದೊರೆತ ಕೆಲವೇ ನಿಮಿಷಗಳ ನಂತರ ಪ್ರತಿಕ್ರಿಯೆ ನೀಡಿದ ಜಮಾತ್‌ ನ ಅಧ್ಯಕ್ಷ ಮೌಲಾ ಅರ್ಷದ್ ಮದನಿ ಅವರು, 'ಇದೊಂದು ದುರಂತ' ಎಂದು ಬಣ್ಣಿಸಿದ್ದಾರೆ. 'ಶಾಸಕಾಂಗವು ತನ್ನ ಕೆಲಸವನ್ನು ಸರಿಯಾಗಿ ಕೆಲಸ ಮಾಡಿಲ್ಲ. ಹೀಗಾಗಿ ಅದರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ತೀರ್ಮಾನಿಸಿದ್ದೇವೆ. ಈಗಾಗಲೇ ವಕೀಲರನ್ನು ಸಂಪರ್ಕಿಸಿದ್ದೇವೆ. ನಮ್ಮ ಅರ್ಜಿಯ ಕರಡು ಸಿದ್ಧವಾಗಿದ್ದು, ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

ಅಂತೆಯೇ 'ಲೋಕಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತ ನಂತರ, ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆಯದಂತೆ ಮಾಡಲು ಜಮಾತ್‌ ತನ್ನ ಎಲ್ಲ ಪ್ರಯತ್ನ ಮಾಡಿತು. ವಿವಿಧ ಪಕ್ಷಗಳ ಸದಸ್ಯರನ್ನು ಭೇಟಿಯಾಗಿ ಮಸೂದೆಯ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದೆವು. ಆದರೆ ಜಾತ್ಯತೀತ ಎಂದು ಹೇಳಿಕೊಳ್ಳುವ ಹಲವು ರಾಜಕೀಯ ಪಕ್ಷಗಳ ನಾಯಕರು ಬೇಜವಾಬ್ದಾರಿ ನಡವಳಿಕೆ ತೋರಿದರು. ಹೀಗಾಗಿಯೇ ಈ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯಿತು. ಅಲ್ಲದೆ 'ಧರ್ಮದ ಆಧಾರದ ಮೇಲೆ ಯಾವುದೇ ನಾಗರಿಕನನ್ನು ಪ್ರತ್ಯೇಕಿಸಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ.

ಈ ಮಸೂದೆಯು ಸಂವಿಧಾನದ 14 ಮತ್ತು 15ನೇ ವಿಧಿಯನ್ನು ಉಲ್ಲಂಘಿಸುತ್ತದೆ.  ದೇಶದ ಭದ್ರತೆ ಮತ್ತು ಸುರಕ್ಷೆಗೂ ಧಕ್ಕೆ ತರುತ್ತದೆ. ಮಸೂದೆಯ ದುಷ್ಪರಿಣಾಮಗಳು ಈಗ ನಮಗೆ ಕಾಣಿಸದಿರಬಹುದು. ಆದರೆ ಒಮ್ಮೆ ರಾಷ್ಟ್ರೀಯ ಪೌರತ್ವ ನೋಂದಣಿ ದೇಶವ್ಯಾಪಿ ಆರಂಭವಾದ ನಂತರ ಲಕ್ಷಾಂತರ ಮುಸ್ಲಿಮರ ಬದುಕಿನ ಮೇಲೆ ಇದರ ಪರಿಣಾಮ ಎದ್ದು ಕಾಣುತ್ತದೆ. ಇದು ಹಿಂದೂ–ಮುಸ್ಲಿಮರ ವಿವಾದವಲ್ಲ. ಬದಲಾಗಿ ಮನುಷ್ಯನ ಮೂಲಭೂತ ಹಕ್ಕುಗಳ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಐಯುಎಂಎಲ್ ತೆಲಂಗಾಣ ಘಟಕದ ಕಾರ್ಯದರ್ಶಿ ಅಬ್ದುಲ್ ಗನಿ ಅವರು, ನಾವು ಈಗಾಗಲೇ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ರನ್ನು ಭೇಟಿ ಮಾಡಿ ಈ ವಿಚಾರದ ಕುರಿತು ಚರ್ಚೆ ನಡೆಸಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತು ಅರ್ಜಿ ಸಲ್ಲಿಸುವ ಕುರಿತು ಸಂಪೂರ್ಣ ಮಾಹಿತಿ ಪಡೆದಿದ್ದು, ಶೀಘ್ರದಲ್ಲೇ ಈ ಕುರಿತು ಅರ್ಜಿ ಸಲ್ಲಿಕೆ ಮಾಡಲಿದ್ದೇವೆ. ಅಲ್ಲದೆ ಎನ್ ಆರ್ ಸಿ ಮತ್ತು ಸಿಎಬಿ ಕಾಯ್ದೆಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಿದ್ದೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com