ನಿರ್ಭಯಾ ಹತ್ಯಾಚಾರಿಗಳನ್ನು ನೇಣಿಗೇರಿಸಲು ಇಬ್ಬರನ್ನು ಕಳುಹಿಸಿ: ಉತ್ತರ ಪ್ರದೇಶಕ್ಕೆ ತಿಹಾರ್ ಜೈಲಿಂದ ಮನವಿ
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಡಿಸೆಂಬರ್ 16ರಂದು ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಗಲ್ಲಿಗೇರಿಸುವ ಕಾರ್ಯಕ್ಕೆ ಇಬ್ಬರನ್ನು ಒದಗಿಸಬೇಕು ಎಂದು ಉತ್ತರ ಪ್ರದೇಶ ಪೊಲೀಸರಿಗೆ ತಿಹಾರ್ ಜೈಲಿನಿಂದ ಮನವಿ ಹೋಗಿದೆ.
Published: 12th December 2019 06:09 PM | Last Updated: 12th December 2019 06:09 PM | A+A A-

ನಿರ್ಭಯಾ ಅತ್ಯಾಚಾರಿಗಳು
ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಡಿಸೆಂಬರ್ 16ರಂದು ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಗಲ್ಲಿಗೇರಿಸುವ ಕಾರ್ಯಕ್ಕೆ ಇಬ್ಬರನ್ನು ಒದಗಿಸಬೇಕು ಎಂದು ಉತ್ತರ ಪ್ರದೇಶ ಪೊಲೀಸರಿಗೆ ತಿಹಾರ್ ಜೈಲಿನಿಂದ ಮನವಿ ಹೋಗಿದೆ.
ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸುವ ಸಿಬ್ಬಂದಿ ಇಲ್ಲ. ಹೀಗಾಗಿ ಗಲ್ಲಿಗೇರಿಸವ ಇಬ್ಬರು ವ್ಯಕ್ತಿಗಳನ್ನು ಕಳುಹಿಸುವಂತೆ ತಿಹಾರ್ ಜೈಲು ಅಧಿಕಾರಿಗಳು ನಮಗೆ ಮನವಿ ಮಾಡಿದ್ದು, ನಮ್ಮ ಇಲಾಖೆ ಏರಿಸುವವರನ್ನು ಒದಗಿಸಲು ಸಿದ್ಧವಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಜೈಲು) ಆನಂದ್ ಕುಮಾರ್ ಅವರು ಹೇಳಿದ್ಧಾರೆ.
ತಿಹಾರ್ ಜೈಲು ಅಧಿಕಾರಿಗಳು ಡಿಸೆಂಬರ್ 9ರಂದು ಫ್ಯಾಕ್ಸ್ ಮೂಲಕ ಮನವಿ ಸಲ್ಲಿಸಿದ್ದಾರೆ. ನಮ್ಮ ಬಳಿ ಇಬ್ಬರು ಗಲ್ಲಿಗೇರಿಸುವವರು ಇದ್ದು, ಅವರು ಕೇಳಿದಾಗ ಒದಗಿಸಲಾಗುವುದು ಕುಮಾರ್ ತಿಳಿಸಿದ್ದಾರೆ.
ನಿರ್ಭಯಾ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆದು ಡಿಸೆಂಬರ್ 16ಕ್ಕೆ 7 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 16ರಂದೇ ಕಾಮುಕರಿಗೆ ನೇಣಿನ ಕುಣಿಕೆ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತಿಹಾರ್ ಜೈಲಿನ ಮೂಲಗಳ ಪ್ರಕಾರ ಜೈಲು ಆಡಳಿತಾಧಿಕಾರಿಗಳು ಈಗಾಗಲೇ 10 ನೇಣು ಹಗ್ಗಳನ್ನು ತಯಾರಿಸಲು ಆರ್ಡರ್ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ನೇಣು ಹಗ್ಗಗಳು ಜೈಲು ಅಧಿಕಾರಿಗಳ ಕೈ ಸೇರಲಿವೆ. ಇದರ ಬೆನ್ನಲ್ಲೇ ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ಕು ಅಪರಾಧಿಗಳನ್ನು ಕೂಡ ಜೈಲಿಗೆ ವಾಪಸ್ ಕರೆತರಲಾಗಿದೆ.