ರಾಹುಲ್ ಗಾಂಧಿ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿ, ಬಹುಶಃ ಅವರಿಗೆ ಸಾವರ್ಕರ್ ಬಗ್ಗೆ ತಿಳಿದಿಲ್ಲ: ದೇವೇಂದ್ರ ಫಡ್ನವಿಸ್ 

ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ದೇಲವೇಂದ್ರ ಫಡ್ನವಿಸ್
ದೇಲವೇಂದ್ರ ಫಡ್ನವಿಸ್

ನಾಗ್ಪುರ: ನನ್ನ ಹೆಸರು ರಾಹುಲ್ ಸಾವರ್ಕರ್ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.


ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿನ್ನೆ ಪ್ರತಿಕ್ರಿಯೆ ನೀಡಿ, ಹಿಂದೂ ವಿಚಾರವಾದಿ ವೀರ ಸಾವರ್ಕರ್ ಜೈಲಿನಲ್ಲಿ ಅನುಭವಿಸಿದಷ್ಟು ಹಿಂಸೆಯನ್ನು ರಾಹುಲ್ ಗಾಂಧಿಯಿಂದ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.


ರಾಹುಲ್ ಗಾಂಧಿಯವರ ಹೇಳಿಕೆ ನಾಚಿಕೆಗೇಡು. ಬಹುಶಃ ಅವರಿಗೆ ಸಾವರ್ಕರ್ ಅವರ ಬಗ್ಗೆ ಗೊತ್ತಿರಲಿಕ್ಕಿಲ್ಲ. ವೀರ ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿ 12 ವರ್ಷಗಳ ಕಾಲ ಹಿಂಸೆ ಅನುಭವಿಸಿದ್ದಾರೆ. ಅದೇ ಕಷ್ಟವನ್ನು ರಾಹುಲ್ ಗಾಂಧಿಯಿಂದ 12 ಗಂಟೆ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಟೀಕಿಸಿದರು. 


ಗಾಂಧಿ ಎಂದು ನಿಮ್ಮ ಹೆಸರಿನೊಂದಿಗೆ ಸೇರಿಸಿಕೊಂಡ ತಕ್ಷಣ ನೀವು ಗಾಂಧಿಯಾಗುವುದಿಲ್ಲ ಎಂದ ಫಡ್ನವಿಸ್ ಶಿವಸೇನೆ ವಿರುದ್ಧ ಕೂಡ ಟೀಕಿಸಿದರು. ಇಂತವರ ಜೊತೆ ಶಿವಸೇನೆ ಅಧಿಕಾರಕ್ಕಾಗಿ ಕೈಜೋಡಿಸಿದೆ. ಸಾವರ್ಕರ್ ಗೆ ಆದ ಅವಮಾನವನ್ನು ಮಹಾರಾಷ್ಟ್ರ ಮತ್ತು ಇಡೀ ದೇಶದ ಜನತೆ ಖಂಡಿತಾ ಸಹಿಸುವುದಿಲ್ಲ. ಹಿಂದೆಯಾದರೆ ಶಿವಸೇನೆ ನಾಯಕರು ಇಂತಹ ಹೇಳಿಕೆಗಳನ್ನು ಖಡಾಖಂಡಿತವಾಗಿ ಖಂಡಿಸುತ್ತಿದ್ದರು, ಈಗೇಕೆ ಮೃದು ಧೋರಣೆ ತಳೆದಿದ್ದಾರೆ ಎಂದು ಪ್ರಶ್ನಿಸಿದರು.


ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾವರ್ಕರ್ ಅವರ ಮೊಮ್ಮಗ ರಂಜಿತ್, ತಮ್ಮ ತಾತನನ್ನು ಅವಮಾನಿಸಿದ್ದಕ್ಕೆ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ರಾಹುಲ್ ಗಾಂಧಿಯವರಿಗೆ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿ ಹೊಡೆಯಬೇಕು ಎಂದು ಹೇಳಿದ್ದಾರೆ.
ಸಾವರ್ಕರ್ ಅವರನ್ನು ಯಾರಾದರು ಅವಮಾನಿಸಿದರೆ ಅವರನ್ನು ಸಾರ್ವಜನಿಕವಾಗಿ ಥಳಿಸುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದರು. ಹಾಗಿರುವಾಗ ರಾಹುಲ್ ಗಾಂಧಿಗೆ ಹೊಡೆಯಬೇಡವೇ ಎಂದು ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com