7 ವರ್ಷವಾದರೂ ಸಿಕ್ಕಿಲ್ಲ ನ್ಯಾಯ: ಈಗಲೂ ಪುಂಡ, ಪೋಕರಿಗಳ ತಾಣವಾಗಿಯೇ ಉಳಿದಿದೆ ನಿರ್ಭಯಾ ಬಸ್ ಹತ್ತಿದ್ದ ಸ್ಥಳ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರ ಡಿಸೆಂಬರ್ 16ರಂದು ಯುವತಿಯೊಬ್ಬಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನಿರ್ಭಯಾ ಮೇಲೆ ದೌರ್ಜನ್ಯ ನಡೆದು ಇಂದಿಗೆ 7 ವರ್ಷಗಳು ಕಳೆದಿದ್ದರೂ, ಈಗಲೂ ನಿರ್ಭಯಾ ಪೋಷಕರು ನ್ಯಾಯದ ನಿರೀಕ್ಷೆಯಲ್ಲಿಯೇ ಇದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರ ಡಿಸೆಂಬರ್ 16ರಂದು ಯುವತಿಯೊಬ್ಬಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ನಿರ್ಭಯಾ ಮೇಲೆ ದೌರ್ಜನ್ಯ ನಡೆದು ಇಂದಿಗೆ 7 ವರ್ಷಗಳು ಕಳೆದಿದ್ದರೂ, ಈಗಲೂ ನಿರ್ಭಯಾ ಪೋಷಕರು ನ್ಯಾಯದ ನಿರೀಕ್ಷೆಯಲ್ಲಿಯೇ ಇದ್ದಾರೆ. 

ಪ್ರಕರಣದ ಬಳಿಕ ದೆಹಲಿಗೆ ಅತ್ಯಾಚಾರ ರಾಜಧಾನಿ ಎಂಬ ಹಣೆಪಟ್ಟಿ ಕೂಡ ಸಿಕ್ಕಿತ್ತು. ತಮ್ಮ ಮಗಳ ಮೇಲೆ ದೌರ್ಜನ್ಯ ನಡೆದು 7 ವರ್ಷಗಳೇ ಕಳೆದರೂ ಈಗಲೂ ನಿರ್ಭಯಾ ಪೋಷಕರು ನ್ಯಾಯಕ್ಕಾಗಿ ಕಾದು ಕುಳಿತಿದ್ದಾರೆ. ನ್ಯಾಯದ ನಿರೀಕ್ಷೆಯಲ್ಲಿರುವ ಅವರಿಗೆ ಕೆಲ ದಿನಗಳ ಹಿಂದಷ್ಟೇ ಕೊಂಚ ಭರವಸೆಗಳೂ ಕೂಡ ಮೂಡಿದೆ. ಅತ್ಯಾಚಾರ ನಡೆಸಿದ್ದ ನಾಲ್ವರು ಅಪರಾಧಿಗಳಿಗೆ ಶೀಘ್ರದಲ್ಲೇ ನೇಣಿನ ಕುಣಿಕೆ ಹಾಕುವ ವರದಿಗಳು ಪ್ರಕಟಗೊಂಡಿದ್ದು, ಪೋಷಕರಲ್ಲಿ ತುಸು ಸಮಾಧಾನವನ್ನು ತಂದಿದೆ. 

2012ರ ಡಿಸೆಂಬರ್ 16 ರಂದು ದೆಹಲಿಯ ಮುನಿರ್ಕಾ ಬಸ್ ನಿಲ್ದಾಣದಲ್ಲಿ ಬಸ್ ಬತ್ತಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ತನ್ನ ಗೆಳೆಯನೊಂದಿಗೆ ಪ್ರಯಾಣಿಸುತ್ತಿದ್ದಳು. ಈ ವೇಳೆ ಬಸ್ ನಲ್ಲಿದ್ದ 6 ಮಂದಿ ಕಾಮುಕರು ಆಕೆಯ ಮೇಲೆ ಅಟ್ಟಹಾಸ ಮೆರೆದಿದ್ದರು. ಈ ವೇಳೆ ಕಾಮುಕರನ್ನು ತಡೆಯಲು ಬಂದ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದರು. ಯುವತಿಯ ಮೇಲೆ ಮೃಗಗಳ ರೀತಿ ಅತ್ಯಾಚಾರವೆಸಗಿದ್ದ ಅಪರಾಧಿಗಳು ಯುವತಿಯನ್ನು ಚಲಿಸುತ್ತಿದ್ದ ಬಸ್ ನಿಂದಲೇ ಹೊರಗೆ ಎಸೆದಿದ್ದರು. ಈ ಘೋರ ಕೃತ್ಯದಿಂದ ಯವತಿ ಸಾವು-ಬದುಕಿನ ಹೋರಾಟ ನಡೆಸಿ, ಚಿಕಿತ್ಸೆ ಫಲಕಾರಿಯಾಗದೆ ಡಿ.29 ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. 

ಪ್ರಕರಣ ಬಳಿಕ ನಿರ್ಭಯಾ ಬಸ್ ಹತ್ತಿದ್ದ ಸ್ಥಳ ಸಾಕಷ್ಟು ಸುದ್ದಿ ಮಾಡಿತ್ತು. ಹಲವು ಮಹಿಳೆಯರು ಬಸ್ ನಿಲ್ದಾಣದ ಭದ್ರತೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಬಳಿಕ ಸರ್ಕಾರ ಭದ್ರತೆಗಳನ್ನು ಹೆಚ್ಚಿಸಲಾಗಿದೆ ಎಂದು ಎಷ್ಟೇ ಹೇಳಿದರೂ, ಈಗಲೂ ನಿರ್ಭಯಾ ಮೇಲೆ ದೌರ್ಜನ್ಯ ನಡೆಸಿದ್ದ ಸ್ಥಳದಲ್ಲಿ ಮಹಿಳೆಯರು ಭೀತಿಯಿಂದ ಓಡಾಡುವ ಪರಿಸ್ಥಿತಿಗಳಿರುವುದು ಕಂಡು ಬಂದಿದೆ. 

ಇದೇ ರಸ್ತೆಯಲ್ಲಿ ಪ್ರತೀನಿತ್ಯ ಓಡಾಡುವ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತೀನಿತ್ಯ ರಾತ್ರಿ 9 ಬಳಿಕ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳವಾಗುತ್ತದೆ. ಸ್ಥಳದಲ್ಲಿ ನಿಲ್ಲುವ ಯುವಕರು ಮಹಿಳೆಯರನ್ನು ಕಂಡ ಕೂಡಲೇ ಕೆಟ್ಟದಾಗಿ ಶಬ್ಧಗಳನ್ನು ಮಾಡುತ್ತಾರೆ. 

ಸಾಮೂಹಿಕ ಅತ್ಯಾಚಾರ ನಡೆದ ಬಳಿಕ ಸರ್ಕಾರ ಭದ್ರತೆ ನೀಡುವುದಾಗಿ ಹೇಳಿತ್ತು. ಆದರೆ, ಅದು ಇನ್ನೂ ಸಾಧ್ಯವಾಗಿಲ್ಲ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. 

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಕುರಿತು ಪ್ರತೀನಿತ್ಯ ಸುದ್ದಿ ಓದುತ್ತಿದ್ದೇವೆ. ಆದರೆ, ಇನ್ನೂ ಆಗಿಲ್. ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಸುವುದಾಗಿ ಹಾಗೂ ಬಸ್ ಗಳಲ್ಲಿ ಜಿಪಿಎಸ್ ಅಳವಡಿಸುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ, ನಿರ್ಭಯಾ ಬಸ್ ಹತ್ತಿದ್ದ ಸ್ಥಳದಲ್ಲಿಯೇ ಇನ್ನೂ ಭದ್ರತಾ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. 

ಕೆಲಸ ಮೇರೆಗೆ ನಾನು ದೆಹಲಿಯಾದ್ಯಂತ ಓಡಾಡುತ್ತೇನೆ. ನಾನು ಮುನಿರ್ಕಾ ಗ್ರಾಮದಲ್ಲಿ ವಾಸವಿದ್ದೇನೆ. ಹೊರಗೆ ಹೋಗುತ್ತಿದ್ದಂತೆಯೇ ನನ್ನ ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ. ನಿಲ್ಧಾಣಕ್ಕೆ ಬರುತ್ತಿದ್ದಂತೆಯೇ ಯಾರಾದರೂ ಬಂದು ನನ್ನನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆಂದಿದ್ದಾರೆ. 

ರಾಣಿ ಕುಮಾರಿ (27) ಮಾತನಾಡಿ, ಬಸ್ ಇಳಿಯುತ್ತಿದ್ದಂತೆಯೇ ಸ್ಥಳದಲ್ಲಿ ಸಾಕಷ್ಟು ಆಟೋಗಳನ್ನು ನಿಂತಿರುವುದು ಕಂಡು ಬರುತ್ತದೆ. ಆಟೋ ಚಾಲಕರು ಗುರಾಯಿಸುವುದನ್ನು ನೋಡಿದರೆ ಭಯವಾಗುತ್ತದೆ ಎಂದು ಹೇಳಿದ್ದಾರೆ. 

ಮತ್ತೊಂದು ವಿಚಾರವೆಂದರೆ, ನಿಲ್ದಾಣದಲ್ಲಿ ಅಷ್ಟು ಆಟೋಗಳು ನಿಂತಿದ್ದರೂ, ಮನೆಗೆ ಹೋಗುವುದಕ್ಕೆ ಒಂದು ಆಟೋವನ್ನು ಕೇಳಿದರೂ ಯಾರೊಬ್ಬರೂ ಬರುವುದಿಲ್ಲ. ಬೆಳಗಿನಿಂದಲೂ ಆಟೋ ಓಡಿಸಿ ಸಾಕಾಗಿದೆ ಎಂದು ಹೇಳುತ್ತಾರೆ. ಆದರೆ, ಮಹಿಳೆಯರನ್ನು ನೋಡಿದ ಕೂಡಲೇ ಅವರ ಬಗ್ಗೆ ಮಾತನಾಡುವುದಕ್ಕೆ ಹಾಗೂ ಅವರನ್ನು ಹಿಂಬಾಲಿಸುವುದಕ್ಕೆ ಮಾತ್ರ ಅವರಿಗೆ ಸಾಕಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ರಾತ್ರಿ ವೇಳೆ ಆಟೋ ಚಾಲಕರು ಬಾರದೇ ಹೋದರೆ, ದೂರು ನೀಡಬಹುದು ಎಂದು ಸರ್ಕಾರ ಹೇಳಿದೆ. ಒಂದೊಮ್ಮೆ ಚಾಲಕ ಒಪ್ಪದೇ ಹೋದರೂ ಆಟೋದಲ್ಲಿ ಕುಳಿತೆ. ಆದರೆ, ಚಾಲಕ ಡ್ರಾಪ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ವೇಳೆ ದೂರು ನೀಡುವುದಾಗಿ ಹೇಳಿದರೂ, ಚಾಲಕ ಆಟೋದಲ್ಲಿ ಗ್ಯಾಸ್ ಇಲ್ಲ ಎಂದು ಹೇಳಿದೆ. ಬಳಿಕ ಆಟೋ ಇಳಿದು ನಡೆದುಕೊಂಡು ಕತ್ತಲೆಯಲ್ಲಿಯೇ ಮನೆಗೆ ತೆರಳಿದ್ದೆ ಎಂದು ಮೀನಾ ಎಂಬ ಮಹಿಳೆಯೊಬ್ಬರು ಹೇಳಿದ್ದಾರೆ. 

ದೆಹಲಿ ಗ್ಯಾಂಗ್ ರೇಪ್ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿ ಮಾಡಿದ್ದರೂ, ಪ್ರಕರಣಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದರೂ. ಘಟನೆ ನಡೆದು 7 ವರ್ಷಗಳು ಕಳೆದರೂ ಈಗಲೂ ಮಹಿಳೆಯರಿಗೆ ಸೂಕ್ತ ಭದ್ರತೆಗಳು ಸಿಗದೆ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ. 

ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ 6 ಜನ ಆರೋಪಿಗಳಲ್ಲಿ ರಾಮ್ ಸಿಂಗ್ ಎಂಬಾತ 2013ರಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆಯೇ ತಿಹಾರ್ ಜೈಲಿನಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಬಾಲಾಪರಾಧಿಗೆ ಗರಿಷ್ಠ 3 ವರ್ಷ ಶಿಕ್ಷೆ ನೀಡಿ, 2015ರಲ್ಲಿ ಬಿಡುಗಡೆ ಮಾಡಲಾಗಿತ್ತು. 

ಉಳಿದ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯವು 2013ರಲ್ಲಿ ತ್ವರಿತ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ 2014ರ ಮಾರ್ಚ್ ತಿಂಗಳಿನಲ್ಲಿ ದೆಹಲಿ ಹೈಕೋರ್ಟ್ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ಖಚಿತಪಡಿಸಿತು. 2017ರಲ್ಲಿ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. 2018ರ ಜುಲೈನಲ್ಲಿ ಮೂವರು ಆರೋಪಿಗಳು 2017ರ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಮರುಪರಿಶೀಲನಾ ಅರ್ಜಿಯ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್, ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com