ಜಾಮಿಯಾ ವಿ.ವಿ ವಿದ್ಯಾರ್ಥಿಗಳ ಮೇಲೆ ಹಲ್ಲೆ: ದೇಶಾದ್ಯಂತ ಭಾರೀ ಪ್ರತಿಭಟನೆ, ಒಗ್ಗಟ್ಟು ಪ್ರದರ್ಶಿಸಿದ ವಿದ್ಯಾರ್ಥಿಗಳು

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕ್ರಮವನ್ನು ಖಂಡಿಸಿ ದೇಶಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ಮಂಗಳವಾರ ತೀವ್ರವಾಗಿದೆ. 
ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿಗಳ ಪ್ರತಿಭಟನೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕ್ರಮವನ್ನು ಖಂಡಿಸಿ ದೇಶಾದ್ಯಂತ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ಮಂಗಳವಾರ ತೀವ್ರವಾಗಿದೆ.


ಆಲಿಘರ್ ನಿಂದ ಬೆಂಗಳೂರು, ಚೆನ್ನೈಯವರೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರಸ್ತೆಗಿಳಿದು ತಮ್ಮ ಆಕ್ರೋಶ, ಅಸಹನೆ ತೋರಿಸುತ್ತಿದ್ದಾರೆ.


ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಭಾನುವಾರ ತಮ್ಮ ವಿ.ವಿ ಕ್ಯಾಂಪಸ್ ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾಥ್ ಕೊಟ್ಟರು. ಪ್ರತಿಭಟನೆ ತೀವ್ರವಾಗಿ ಪೊಲೀಸರು ಕ್ಯಾಂಪಸ್ ಒಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ್ದರು. ಇದರಿಂದ ಕನಿಷ್ಠ 60 ವಿದ್ಯಾರ್ಥಿಗಳು ಗಾಯಗೊಂಡಿದ್ದರು. 


ಇದೀಗ ಈ ಘಟನೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾಗಿದೆ. ನಿನ್ನೆ ಲಕ್ನೊದಲ್ಲಿ ನಡ್ವಾ ಕಾಲೇಜು ವಿದ್ಯಾರ್ಥಿಗಳು ಬೃಹತ್ ಸಂಖ್ಯೆಯಲ್ಲಿ ಸೇರಿ ಆವಾಜ್ ದೊ, ಹಮ್ ಏಕ್ ಹೈ(ನಾವೆಲ್ಲರೂ ಒಂದೇ ಎಂದು ಕರೆ ನೀಡಿ) ಎಂದು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಪೊಲೀಸರು ಅವರನ್ನು ತಡೆಯಲು ಯತ್ನಿಸಿದರು.


ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಕ್ಯಾಂಪಸ್ ನಲ್ಲಿ ನಿನ್ನೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ಸಾಗಿದರು. ನಾವು ಭಾರತೀಯರು ಅಲ್ಲ ಎಂದು ಹೇಳಿಕೊಳ್ಳಲು ನಿಮಗೆ ಎಷ್ಟು ಧೈರ್ಯವಿದೆ, ಮುಸ್ಲಿಂರ ವಿರುದ್ಧ ದ್ವೇಷವೇಕೆ ಎಂದು ಕೇಳಿದರು.
ಹೈದರಾಬಾದಿನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ, ಬಿಹಾರದ ಪಾಟ್ನಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಸಹ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.


ಬನಾರಸ್ ನ ಹಿಂದೂ ವಿಶ್ವವಿದ್ಯಾಲಯ, ಕೋಲ್ಕತ್ತಾದ ಜಾದವ್ ಪುರ ಮತ್ತು ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಸಹ ಪ್ರತಿಭಟನೆ ನಡೆಸಿದ್ದಾರೆ.


ಪೊಲೀಸರು ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಪೊಲೀಸರು ಬೈಕ್ ಗಳನ್ನು ಹೊಡೆದು ಹಾಕುವುದು, ವಿದ್ಯಾರ್ಥಿಗಳಿಗೆ ಹೊಡೆಯುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎಂದು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಹೇಳಿದರು.


ಪಂಜಾಬ್, ಚಂಡೀಗಢ್ ಮತ್ತು ಪಟಿಯಾಲಗಳಲ್ಲಿ ಸಹ ಪ್ರತಿಭಟನೆ ವ್ಯಕ್ತವಾಗಿದೆ. ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ನಿನ್ನೆ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು. ಖಾನ್ಪುರ ಐಐಟಿ ವಿದ್ಯಾರ್ಥಿಗಳು, ಮದ್ರಾಸ್ ಮತ್ತು ಬಾಂಬೆಯ ಐಐಟಿ ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com