ಜಾಮಿಯಾ ವಿ.ವಿ ಹಿಂಸಾಚಾರ: ಕಾಂಗ್ರೆಸ್ ಮಾಜಿ ಶಾಸಕ ಸೇರಿ 7 ಮಂದಿ ವಿರುದ್ಧ ದೆಹಲಿ ಪೊಲೀಸರಿಂದ ಎಫ್ ಐಆರ್ 

ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದು ಅದರಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಆಸಿಫ್ ಖಾನ್ ಆರೋಪಿ ಎಂದು ನಮೂದಿಸಿದ್ದಾರೆ.
ಜಾಮಿಯಾ ವಿ.ವಿ ಹಿಂಸಾಚಾರ: ಕಾಂಗ್ರೆಸ್ ಮಾಜಿ ಶಾಸಕ ಸೇರಿ 7 ಮಂದಿ ವಿರುದ್ಧ ದೆಹಲಿ ಪೊಲೀಸರಿಂದ ಎಫ್ ಐಆರ್ 

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ 15ರಂದು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿ ದೇಶಾದ್ಯಂತ ಇದೀಗ ಅದರ ಕಿಚ್ಚು ಹೆಚ್ಚಾದ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದು ಅದರಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಆಸಿಫ್ ಖಾನ್ ಆರೋಪಿ ಎಂದು ನಮೂದಿಸಿದ್ದಾರೆ.


ಪೊಲೀಸರು ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಮತ್ತು ಇತರ ಆರು ಮಂದಿ ಆರೋಪಿಗಳು ಎಂದು ನಮೂದಿಸಿದ್ದಾರೆ. ಪ್ರಕರಣದಲ್ಲಿ ಇತರ ಆರೋಪಿಗಳೆಂದರೆ ಸ್ಥಳೀಯ ರಾಜಕಾರಣಿಗಳಾದ ಆಶು ಖಾನ್, ಮುಸ್ತಾಫಾ ಮತ್ತು ಹೈದರ್, ಎಐಎಸ್ಎ ಸದಸ್ಯ ಚಂದನ್ ಕುಮಾರ್, ಎಸ್ಐಒ ಸದಸ್ಯ ಆಸಿಫ್ ತನ್ಹಾ ಮತ್ತು ಸಿವೈಎಸ್ಎಸ್ ಸದಸ್ಯ ಕಾಸಿಮ್ ಉಸ್ಮೈನ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಪೊಲೀಸರು ಸಲ್ಲಿಸಿರುವ ಎಫ್ಐಆರ್ ನ ಸಾರಾಂಶ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಂಸತ್ತು ಭವನ ಮತ್ತು ರಾಷ್ಟ್ರಪತಿ ಭವನದವರೆಗೆ ಹಲವರು ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದರು. ಜಾಮಿಯಾ ವಿ.ವಿ ಹತ್ತಿರ ಅಪರಾಹ್ನ 3 ಗಂಟೆ ಹೊತ್ತಿಗೆ ಪೊಲೀಸರ ತೀವ್ರ ಭದ್ರತೆಯಿತ್ತು. ಹಲವು ಪ್ರತಿಭಟನಾಕಾರರು, ಮಹಿಳೆಯರು, ರಾಜಕಾರಣಿಗಳು ವಿಶ್ವವಿದ್ಯಾಲಯ ಕಡೆಯಿಂದ ಬಂದಿದ್ದರು. 


ಈ ಸಂದರ್ಭದಲ್ಲಿ ಆಸಿಫ್ ಮತ್ತು ಆಶು ಪ್ರತಿಭಟನಾಕಾರರನ್ನು ಪ್ರಚೋದಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಘೋಷಣೆ ಕೂಗುತ್ತಾ ಮಥುರಾ ರಸ್ತೆ ಕಡೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನೆ ಹಿಂಸಾರೂಪ ತಾಳಿತು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ಬಸ್ಸುಗಳಿಗೆ ಬೆಂಕಿ ಹಚ್ಚಿದರು. ವಾಹನಗಳನ್ನು ಜಖಂಗೊಳಿಸಿದರು. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿ ವಿಶ್ವವಿದ್ಯಾಲಯದ ಕಡೆಗೆ ಹೊರಟರು ಎಂದು ಎಫ್ ಐಆರ್ ನಲ್ಲಿ ಪೊಲೀಸರು ಹೇಳುತ್ತಾರೆ.


ಪ್ರತಿಭಟನೆ ವೇಳೆ ಶಾಂತಿ ಕಾಪಾಡುವಂತೆ ಪೊಲೀಸರು ಎಷ್ಟೇ ಮನವಿ ಮಾಡಿಕೊಂಡರೂ ಸಹ ಕೇಳಲಿಲ್ಲ, ವಿಶ್ವವಿದ್ಯಾಲಯ ಹತ್ತಿರವಿದ್ದ ಸಿಎಟಿ ಆಂಬ್ಯುಲೆನ್ಸ್ ನ್ನು ಧ್ವಂಸಗೊಳಿಸಿದರು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು. ಆಗ ವಿಶ್ವವಿದ್ಯಾಲಯದ ಒಳಗೆ ಗೇಟ್ ಸಂಖ್ಯೆ 4,7 ಮತ್ತು 8 ಕಡೆಯಿಂದ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಎಸೆಯುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ ಎಂದು ತಿಳಿದ ಪೊಲೀಸರು ಕಡಿಮೆ ಸಿಬ್ಬಂದಿಯೊಂದಿಗೆ ವಿಶ್ವವಿದ್ಯಾಲಯ ಕ್ಯಾಂಪಸ್ ಒಳಗೆ ಹೋಗಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿದ್ದವರನ್ನು ಹೊರಗೆ ಕರೆಸಿದರು. ಈ ಹಂತದಲ್ಲಿ ಹಲವು ಪೊಲೀಸರಿಗೆ ಗಂಭೀರ ಗಾಯವಾಗಿದೆ. 


ಪ್ರತಿಭಟನಾಕಾರರು ಟಿಕೋನಾ ಪಾರ್ಕ್ ಮತ್ತು ಜಾಕಿರ್ ನಗರ ಧಲನ್ ಪೊಲೀಸ್ ಬೂತ್‌ಗಳನ್ನು ಧ್ವಂಸಗೊಳಿಸಿದ್ದಾರೆ, ಸುಮಾರು 70ರಿಂದ 80 ಮೋಟಾರು ಬೈಕ್ ಗಳನ್ನು ಸಹ ಧ್ವಂಸ ಮಾಡಲಾಗಿದೆ ಎಂದು ಎಫ್ಐಆರ್ ನಲ್ಲಿ ಪೊಲೀಸರು ನಮೂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com