ನಿರ್ಭಯಾ ಕೇಸು ವಿಚಾರಣೆ ನಡೆಸಿದ 'ಸುಪ್ರೀಂ': ಇಂದು ಮಧ್ಯಾಹ್ನ 1 ಗಂಟೆಗೆ ತೀರ್ಪು ಪ್ರಕಟ 

2012ರಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಕೇಸಿನ ಆರೋಪಿ ಅಕ್ಷಯ್ ಕುಮಾರ್ ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆ ವಿರುದ್ಧ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಕೈಗೆತ್ತಿಕೊಂಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: 2012ರಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಕೇಸಿನ ಆರೋಪಿ ಅಕ್ಷಯ್ ಕುಮಾರ್ ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆ ವಿರುದ್ಧ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಕೈಗೆತ್ತಿಕೊಂಡಿದೆ.


ಈ ಸಂದರ್ಭದಲ್ಲಿ ವಾದ ಮಂಡಿಸಿದ ಅಕ್ಷಯ್ ಕುಮಾರ್ ಪರ ವಕೀಲ, ದೆಹಲಿ, ಎನ್ ಸಿಆರ್ ಪ್ರದೇಶಗಳಲ್ಲಿ ವಾಯುಮಾಲಿನ್ಯ ಮಿತಿಮೀರಿ ಹೋಗಿದ್ದು ರಾಸಾಯನಿಕ ಬೆರೆತು ವಿಷಕಾರಿಯಾಗಿದೆ. ಜನರ ಜೀವಾವಧಿ ಕಡಿಮೆಯಾಗುತ್ತಾ ಹೋಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರಿಗಾದರೂ ಗಲ್ಲುಶಿಕ್ಷೆ ಏಕೆ ವಿಧಿಸಬೇಕು ಎಂದು ಪ್ರಶ್ನಿಸಿದರು.


ನಿರ್ಭಯಾಳ ಸಾವಿನ ಬಗ್ಗೆ ಕೂಡ ಸಂಶಯ ವ್ಯಕ್ತಪಡಿಸಿದ ನ್ಯಾಯವಾದಿಗಳು ಆ ಹೇಳಿಕೆಯನ್ನು ಅವಲಂಬಿಸಿ ತೀರ್ಪು ಕೊಡಲು ಸಾಧ್ಯವಿಲ್ಲ ಎಂದರು.


ಕೇವಲ 21 ನಿಮಿಷಗಳಲ್ಲಿ ಎಲ್ಲಾ 6 ಮಂದಿ ಬಸ್ಸಿನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಲು ಸಾಧ್ಯವಿಲ್ಲ. ಆಕೆಯ ಸಾವಿನ ಘೋಷಣೆಯಲ್ಲಿ ಯಾವುದೇ ಆರೋಪಿಯನ್ನು ಹೆಸರಿಸಲಿಲ್ಲ ಮತ್ತು ಆರೋಪಿಗಳು ಬಳಸಿದ ಕಬ್ಬಿಣದ ಸಲಾಕೆಯನ್ನು ಸಹ ಉಲ್ಲೇಖಿಸಿಲ್ಲ ಎಂದು ಆರೋಪಿ ಪರ ವಾದ ಮಂಡಿಸುವಾಗ ಹೇಳಿದರು.ತಿಹಾರ್ ಜೈಲಿನ ನಿವೃತ್ತ ಅಧಿಕಾರಿಯ ಆದೇಶವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.


ಅರ್ಜಿಯನ್ನು ನಿರಾಕರಿಸುವಂತೆ ಒತ್ತಾಯಿಸಿದ ನಿರ್ಭಯಾ ಪೋಷಕರ ಪರ ವಕೀಲರು, ನಿರ್ಭಯಾ ಕೊಲೆ ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಿ ನ್ಯಾಯ ಒದಗಿಸದಿದ್ದರೆ ದೇವರು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಯಾವುದೇ ಕಾರಣಕ್ಕೂ ಜೀವದಾನ ನೀಡಬಾರದು ಎಂದರು.


ಇಂದು ವಿಚಾರಣೆ ನಡೆಯುತ್ತಿದ್ದ ವೇಳೆ ನಿರ್ಭಯಾಳ ಪೋಷಕರು ಕೋರ್ಟ್ ನಲ್ಲಿ ಉಪಸ್ಥಿತರಿದ್ದರು. 


2012ರ ಡಿಸೆಂಬರ್ 16ರಂದು 23 ವರ್ಷದ ಯುವತಿ ನಿರ್ಭಯಾಳ ಮೇಲೆ ಆರು ಮಂದಿ ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿ ನಂತರ ಭೀಕರವಾಗಿ ಹತ್ಯೆಗೈದಿದ್ದರು. ಇದಕ್ಕೆ ದೇಶಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ನಂತರ ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಅದೇ ತಿಂಗಳು ಡಿಸೆಂಬರ್ 28ರಂದು ಮೃತಪಟ್ಟಿದ್ದಳು.


ವಿಚಾರಣೆ ನಡೆಸಿದ ದೆಹಲಿಯ ವಿಶೇಷ ತ್ವರಿತ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿತ್ತು. 2014ರಲ್ಲಿ ದೆಹಲಿ ಕೋರ್ಟ್ ಸಹ ಈ ತೀರ್ಪನ್ನು ಎತ್ತಿಹಿಡಿದಿತ್ತು. 


ಅತ್ಯಾಚಾರ ನಡೆದ ಸಮಯದಲ್ಲಿ ಒಬ್ಬ ಆರೋಪಿ ಬಾಲಾಪರಾಧಿಯಾಗಿದ್ದರಿಂದ ಆತನನ್ನು ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಯಿತು. ಮತ್ತೊಬ್ಬ ಆರೋಪಿ ರಾಮ್ ಸಿಂಗ್ 2013ರಲ್ಲಿ ತಿಹಾರ್ ಜೈಲಿನಲ್ಲಿ ಮೃತಪಟ್ಟಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com