ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2003ರಲ್ಲಿ ಪೌರತ್ವ ಕಾಯ್ದೆಗೆ ಬೆಂಬಲಿಸಿದ್ದರು: ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ 

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ 2003ರಲ್ಲಿ ಅದರ ಪರವಾಗಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣ ಬಿಜೆಪಿ ಗುರುವಾರ 2003ರಲ್ಲಿ ರಾಜ್ಯಸಭೆಯಲ್ಲಿ ನಡೆದ ಕಲಾಪದ ವಿಡಿಯೊ ತುಣುಕನ್ನು ಹೊರಬಿಟ್ಟಿದ್ದು ಅದರಲ್ಲಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರಲು ಮನವ

Published: 19th December 2019 02:01 PM  |   Last Updated: 19th December 2019 02:55 PM   |  A+A-


Dr Manmohan Singh

ಡಾ ಮನಮೋಹನ್ ಸಿಂಗ್

Posted By : Sumana Upadhyaya
Source : PTI

ನವದೆಹಲಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ 2003ರಲ್ಲಿ ಅದರ ಪರವಾಗಿತ್ತೇ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣ ಬಿಜೆಪಿ ಗುರುವಾರ 2003ರಲ್ಲಿ ರಾಜ್ಯಸಭೆಯಲ್ಲಿ ನಡೆದ ಕಲಾಪದ ವಿಡಿಯೊ ತುಣುಕನ್ನು ಹೊರಬಿಟ್ಟಿದ್ದು ಅದರಲ್ಲಿ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅಂದು ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ನಿಂತು ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರಲು ಮನವಿ ಮಾಡಿಕೊಂಡಿದ್ದರು.


ಭಾರತೀಯ ಜನತಾ ಪಾರ್ಟಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೊ ಹರಿಯಬಿಡಲಾಗಿದೆ. 2003ರಲ್ಲಿ ಡಾ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ, ನೆರೆಯ ದೇಶಗಳಲ್ಲಿ ಧಾರ್ಮಿಕ ಹಿಂಸೆ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ಇಲ್ಲಿನ ಪೌರತ್ವವನ್ನು ನೀಡುವಲ್ಲಿ ಸರ್ಕಾರ ಮುಕ್ತ ಧೋರಣೆ ತಳೆಯಬೇಕು. ಅದಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ಹಾದಿ ಮಾಡಿಕೊಡುತ್ತದೆ ಎಂದು ಹೇಳಿದ್ದರು.


ಮನಮೋಹನ್ ಸಿಂಗ್ ಅವರು ಮೇಲ್ಮನೆಯಲ್ಲಿ ಭಾವನಾತ್ಮಕವಾಗಿ ಮಾತನಾಡುತ್ತಾ, ನಿರಾಶ್ರಿತರನ್ನು ನಮ್ಮ ದೇಶದಲ್ಲಿ ಪರಿಗಣಿಸುತ್ತಿರುವುದರ ಬಗ್ಗೆ ನಾನು ಕೆಲವೊಂದು ವಿಷಯಗಳನ್ನು ಹೇಳಬಯಸುತ್ತೇನೆ. ನಮ್ಮ ದೇಶ ಇಬ್ಘಾಗವಾದ ನಂತರ ಬಾಂಗ್ಲಾದೇಶಗಳಂತಹ ದೇಶಗಳ ಅಲ್ಪಸಂಖ್ಯಾತರು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಅಲ್ಲಿ ಜೀವನ ನಡೆಸಲು ಸಾಧ್ಯವಾಗದೆ ನಮ್ಮ ದೇಶಕ್ಕೆ ಆಶ್ರಯ ಬಯಸಿ ಬಂದವರಿಗೆ ಇಲ್ಲಿನ ನಾಗರಿಕತ್ವ ನೀಡಬೇಕು, ಈ ವಿಷಯದಲ್ಲಿ ಮುಕ್ತ ಧೋರಣೆ ತಳೆಯಬೇಕು ಎಂದು ಕೇಳಿಕೊಂಡಿದ್ದರು.


ನಂತರ ಸದನದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿಯವರ ಗಮನ ಸೆಳೆದು, ಪೌರತ್ವ ಕಾಯ್ದೆ ಸಂಬಂಧ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಉಪಪ್ರಧಾನಿಗಳ ಗಮನಕ್ಕೆ ಈ ವಿಷಯವನ್ನು ತರುತ್ತಿದ್ದೇನೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು.


ಆ ಸಂದರ್ಭದಲ್ಲಿ ಸಭಾಪತಿಗಳು ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರು ಸಹ ಧಾರ್ಮಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಆಡ್ವಾಣಿಯವರಿಗೆ ಹೇಳಿದಾಗ ಅದಕ್ಕೆ ಉಪಪ್ರಧಾನಿ ಆಡ್ವಾಣಿಯವರು ಮೇಡಂ ನಾನು ಆ ಅಭಿಪ್ರಾಯವನ್ನು ಸಂಪೂರ್ಣ ಅನುಮೋದಿಸುತ್ತೇನೆ ಎಂದು ಉತ್ತರಿಸಿದ್ದರು.


ಆದರೆ ಇಂದು ಕಾಂಗ್ರೆಸ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದು ಅದನ್ನು ಅಸಂವಿಧಾನಿಕ ಎಂದು ಸರ್ಕಾರ ಹಿಂಪಡೆಯಬೇಕು ಎನ್ನುತ್ತಿದೆ ಎಂದು ಬಿಜೆಪಿಯ ಐಟಿ ಕೇಂದ್ರದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp