ದೆಹಲಿಯಲ್ಲಿ ಹಿಂಸಾಚಾರ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಗೆ 14 ದಿನ ನ್ಯಾಯಾಂಗ ಬಂಧನ

ಹಳೆ ದೆಹಲಿಯ ದರಿಯಾಗಂಜ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚಂದ್ರಶೇಖರ್ ಆಜಾದ್
ಚಂದ್ರಶೇಖರ್ ಆಜಾದ್

ನವದೆಹಲಿ: ಹಳೆ ದೆಹಲಿಯ ದರಿಯಾಗಂಜ್ ನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಚಂದ್ರಶೇಖರ್ ಆಜಾದ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಸಿಟಿ ಕೋರ್ಟ್ ಗೆ ಹಾಜರುಪಡಿಸಿದರು. ಅಲ್ಲದೆ ಆಜಾದ್ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಪೊಲೀಸರು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಅಗತ್ಯ ಇದೆ ಎಂದು ಮನವಿ ಮಾಡಿದರು. 

ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್, ಆಜಾದ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಲ್ಲದೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಇತರೆ 15 ಮಂದಿಯನ್ನು ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. 

ರಾಜಧಾನಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಆಜಾದ್ ಸಂಘಟನೆ ಶುಕ್ರವಾರ ಜಾಮಾ ಮಸೀದಿಯಿಂದ ಜಂತರ್ ಮಂತರ್ ವರೆಗೆ  ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿತ್ತು.

ನಿನ್ನೆ ತಡ ರಾತ್ರಿ ದೆಹಲಿಯ ದರಿಯಾಗಂಜ್ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅನುಮತಿ ಇಲ್ಲದೆ ಹಲವು ಮಂದಿ ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಪೊಲೀಸರು ಬಂಧಿಸಿದ್ದು, ಇದರೊಂದಿಗೆ ಬಂಧನಕ್ಕೊಳಗಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com