ಪಂಕ್ಚರ್ ಶಾಪ್, ಗುಜರಿ ಅಂಗಡಿ, ಟೀ ಅಂಗಡಿ, ಮುಸ್ಲಿಮರಿಗೆ ಕಾಂಗ್ರೆಸ್ ನ ಕೊಡುಗೆಗಳು: ನಿತಿನ್ ಗಡ್ಕರಿ ವ್ಯಂಗ್ಯ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಮೂಲಕ ಅಲ್ಪ ಸಂಖ್ಯಾತರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತೆ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಿಡಿಕಾರಿದ್ದಾರೆ.
ಸಾರಿಗೆ ಸಚಿವ ನಿತಿನ್ ಗಡ್ಕರಿ
ಸಾರಿಗೆ ಸಚಿವ ನಿತಿನ್ ಗಡ್ಕರಿ

ನಾಗ​ಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಮೂಲಕ ಅಲ್ಪ ಸಂಖ್ಯಾತರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತೆ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಿಡಿಕಾರಿದ್ದಾರೆ.

ನಾಗಪುರದ ಸಂವಿಧಾನ ವೃತ್ತದಲ್ಲಿ ಸಂಘ ಪರಿವಾರ ಹಮ್ಮಿಕೊಂಡಿದ್ದ ಆರ್​ಎಸ್ಎಸ್​ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್​ ಅಂಬೇಡ್ಕರ್​ ಅವರ ಕನಸನ್ನು ಈಡೇರಿಸುವ ಪ್ರಯತ್ನವಾಗಿದೆ. ಯಾರು ಎಷ್ಟೇ ವಿರೋಧಿಸಿದರು ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಸಿಎಎ ಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಆ ಮೂಲಕ ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್​ ಅಂಬೇಡ್ಕರ್​ ಅವರ ಆಶಯಗಳನ್ನು ವಿರೋಧಿಸುತ್ತಿದೆ. 

ಪಾಕಿಸ್ತಾನ, ಆಫ್ಘಾನಿಸ್ತಾನದಲ್ಲಿರುವ ಅಲ್ಪ ಸಂಖ್ಯಾತರಿಗೆ ಯಾವುದೇ ಸಂದರ್ಭದಲ್ಲೂ ಭಾರತದ ನೆರವು ಬೇಕಿದ್ದರೆ, ಸದಾ ಕಾಲ ಅದನ್ನು ಮಾಡಲು ಸಿದ್ಧ ಎಂದು ಹಿಂದೊಮ್ಮೆ ಸ್ವತಃ ಗಾಂಧೀಜಿಯೇ ಹೇಳಿದ್ದರು. ಅಲ್ಲದೆ ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲೂ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕ್ರಿಶ್ಚಿಯನ್ನರು, ಹಿಂದೂಗಳು, ಸಿಖ್ಖರು, ಜೈನರು ಮತ್ತು ಪಾರ್ಸಿಗಳು ಯಾವಾಗ ಬೇಕಿದ್ದರೂ ಭಾರತಕ್ಕೆ ಬರಬಹುದು. ಅವರನ್ನು ನಿರಾಶ್ರಿತರು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಅಂಬೇಡ್ಕರ್​ ಅವರು, ಮುಸ್ಲಿಮರಿಗೆ ಹೋಗಲು ವಿಶ್ವದಲ್ಲಿ 100 ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳಿವೆ. ಆದರೆ, ಈ ಅಲ್ಪಸಂಖ್ಯಾತರಿಗೆ ಭಾರತ ಬಿಟ್ಟು ಬೇರೆಲ್ಲಿಯೂ ಹೋಗಲಾಗಲ್ಲ ಎಂದಿದ್ದರು. ಈ ಮಹನೀಯರ ಮಾತುಗಳನ್ನು ನಾವು ಈಡೇರಿಸುತ್ತಿದ್ದೇವೆ, ತಪ್ಪೇನಿದೆ ಎಂದು ಗಡ್ಕರಿ ಪ್ರಶ್ನಿಸಿದರು.

ಹೀಗಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುವ ಮೂಲಕ ಮತ್ತೆ ತನ್ನ ಕ್ಷುಲ್ಲಕ ರಾಜಕೀಯವನ್ನು ಜಗಜ್ಜಾಹಿರು ಮಾಡಿದೆ. ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರ ಪರಿಗಣಿಸಿದೆ. ಇಷ್ಟಕ್ಕೂ ಮುಸ್ಲಿಮರಿಗೆ ಕಾಂಗ್ರೆಸ್​ ಕೊಟ್ಟದ್ದೇನು..? ಗುಜರಿ ಅಂಗಡಿ, ಪಂಕ್ಚರ್ ಶಾಪ್ ಮತ್ತು ಟೀ ಅಂಗಡಿಗಳನ್ನಾ..?  ಹಿಂದುತ್ವ ಎಂದರೆ ಸಂಕುಚಿತ ಮನೋಭಾವವಲ್ಲ. ಹಿಂದುತ್ವ ಎಂದರೆ ಅದು ರಾಷ್ಟ್ರೀಯತೆ ಎಂದು ಗಡ್ಕರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com