ಜೆಯು ವಿದ್ಯಾರ್ಥಿಗಳ ಪ್ರತಿಭಟನೆ, ಕಾರಿಗೆ ಮುತ್ತಿಗೆ, ಘೇರಾವ್: ಕಾರ್ಯಕ್ರಮದಿಂದ ಪಶ್ಚಿಮ ಬಂಗಾಳ ರಾಜ್ಯಪಾಲ ವಾಪಸ್!

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಾದವ್​ಪುರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾಗಿದ್ದು ಮಂಗಳವಾರ ಮತ್ತೆ ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೆ ಕಪ್ಪು ಬಾವುಟ ತೋರಿಸಿ ಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್

ಕೋಲ್ಕತ್ತಾ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಾದವ್​ಪುರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾಗಿದ್ದು ಮಂಗಳವಾರ ಮತ್ತೆ ರಾಜ್ಯಪಾಲ ಜಗದೀಪ್ ಧಂಕರ್ ಅವರಿಗೆ ಕಪ್ಪು ಬಾವುಟ ತೋರಿಸಿ ಫಲಕ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.


ಬಿಜೆಪಿ ಕಾರ್ಯಕರ್ತ ಮಿ. ಜಗದೀಪ್ ಧಂಕರ್ ವಾಪಾಸ್ ಹೋಗಿ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು ರಾಜ್ಯಪಾಲರು ಹಿಂತಿರುಗಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಈ ಇಡೀ ಘಟನೆ ಅನಾರೋಗ್ಯಕರ ಮತ್ತು ಆತಂಕವನ್ನುಂಟುಮಾಡುತ್ತಿದೆ ಎಂದು ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ.


 ಜಾದವ್ ಪುರ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ರಾಜ್ಯಪಾಲ ಜಗದೀಪ್ ಧಂಕರ್ ಗೆ ಆಹ್ವಾನಿಸಲಾಗಿತ್ತು. ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮಕ್ಕಾಗಿ ಅವರು ಆಗಮಿಸಿದ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳು ಅವರನ್ನು ಕಪ್ಪು ಬಾವುಟ ತೋರಿಸಿ ಸ್ವಾಗತಿಸಿ ಧಂಕರ್ ಹಿಂದೆ ಹೋಗಿ, ವಾಪಸ್ ಹೋಗಿ ಎಂದು ಘೋಷಣೆ ಕೂಗಿದರು.ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ.


ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿದ ರಾಜ್ಯಪಾಲರು, ವಿಶ್ವಿವಿದ್ಯಾಲಯ ಆಡಳಿತ ಮಂಡಳಿ ಪರಿಸ್ಥಿತಿ ನಿಭಾಯಿಸದೇ ಈ ರೀತಿ ಪ್ರತಿಭಟನೆಗೆ ಅವಕಾಶ ನೀಡಿರುವುದು ನನಗೆ ಆಘಾತ ನೀಡಿದೆ. ಇದು ವ್ಯವಸ್ಥೆಯ ಸಂಪೂರ್ಣ ಕುಸಿತ. ವಿಶ್ವವಿದ್ಯಾಲಯದಲ್ಲಿ ಕಷ್ಟಪಟ್ಟು ಕಲಿತ ವಿದ್ಯಾರ್ಥಿಗಳಿಗೆ ಪದವಿ ನೀಡಿ ಸನ್ಮಾನಿಸಲೆಂದು ನಾನು ಹೋಗಿದ್ದೆ. ಆದರೆ ದುರದೃಷ್ಟಕ್ಕೆ ಅಲ್ಲಿ ಆಗುತ್ತಿರುವ ಘಟನೆ ನೋಡಿದರೆ ಆತಂಕವಾಗುತ್ತಿದೆ ಎಂದು ಹೇಳಿದ್ದಾರೆ.


ವಿದ್ಯಾರ್ಥಿಗಳು ನಡೆದುಕೊಂಡ ವರ್ತನೆ ನೋವು ತರಿಸಿತು. ಉಪಕುಲಪತಿಗಳು ಉದ್ದೇಶಪೂರ್ವಕವಾಗಿ ಕಟ್ಟುಪಾಡು ಮರೆತು, ಪ್ರತಿಭಟನೆ ನೋಡುತ್ತಾ ನಿಂತರು. ನಿಯಮ ಪಾಲನಾ ಅಧಿಕಾರದಲ್ಲಿ ಅವರು ಸಂಪೂರ್ಣವಾಗಿ ಸೋತಿದ್ದಾರೆ ಎಂದು ಕೂಡ ಧನ್ಕರ್​ ಟ್ವೀಟ್​ ಮಾಡಿದ್ದಾರೆ.


ಸಮಾರಂಭ ನಡೆಯುವ ಸ್ಥಳಕ್ಕೆ ಹೋಗಲು ಸುಮಾರು 50 ಮಂದಿ ತಮ್ಮನ್ನು ತಡೆದರು. ಇಡೀ ವ್ಯವಸ್ಥೆಯನ್ನು ಒತ್ತೆಯಾಳುಗಳಾಗಿ ಇರಿಸಲಾಗಿದೆ. ಇದಕ್ಕೆ ಅವಕಾಶ ನೀಡಿದವರು ತಮ್ಮ ಜವಾಬ್ದಾರಿಯನ್ನು ಮರೆತುಬಿಟ್ಟಿದ್ದಾರೆ. ಸಾಂವಿಧಾನಿಕ ಮುಖ್ಯಸ್ಥನಾಗಿ ಕಾನೂನಿನ ಉಲ್ಲಂಘನೆಯಾಗುತ್ತಿರುವುದು ನೋಡಿದರೆ ಕಳವಳವಾಗುತ್ತಿದೆ ಎಂದು ಸಹ ಟ್ವೀಟ್ ಮಾಡಿದ್ದಾರೆ.


ನಿನ್ನೆ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಅಧಿಕೃತ ಸಭೆಯಲ್ಲಿ ಭಾಗವಹಿಸಲೆಂದು ರಾಜ್ಯಪಾಲರು ಆಗಮಿಸಿದ್ದ ವೇಳೆ ಕೂಡ ವಿದ್ಯಾರ್ಥಿಗಳು ಬೃಹತ್ ಸಂಖ್ಯೆಯಲ್ಲಿ ಅವರ ಕಾರಿಗೆ ಮುತ್ತಿಗೆ ಹಾಕಿ ತಡೆದು ಕಪ್ಪು ಬಾವುಟ ಪ್ರದರ್ಶಿಸಿ ಹಿಂದೆ ಹೋಗಿ ಎಂದು ಘೋಷಣೆ ಕೂಗಿದ್ದರು. 


ರಾಜ್ಯಪಾಲರು ಬಿಜೆಪಿಯ ಸೇವಕನಂತೆ ನಡೆದುಕೊಳ್ಳುತ್ತಿದ್ದು ರಾಜ್ಯಪಾಲರಾಗಿ ನಿಸ್ಪಕ್ಷಪಾತವಾಗಿ ವರ್ತಿಸುತ್ತಿಲ್ಲ, ಪೌರತ್ವ ತಿದ್ದುಪಡಿ ಕಾಯ್ದೆಗೆ ಅವರು ಬೆಂಬಲಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com