ರಾಬರ್ಟ್ ವಾದ್ರಾ ನನ್ನ ಪತಿ, ಅವರನ್ನು ಬೆಂಬಲಿಸುತ್ತೇನೆ; ಪ್ರಿಯಾಂಕಾ ಗಾಂಧಿ

ಪೂರ್ವ ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಕೆಲವೇ...
ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ
ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ

ನವದೆಹಲಿ: ಪೂರ್ವ ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಕೆಲವೇ ಹೊತ್ತುಗಳ ಮೊದಲು ಪ್ರಿಯಾಂಕಾ ಗಾಂಧಿ ತಮ್ಮ ಪತಿ ರಾಬರ್ಟ್ ವಾದ್ರಾ ಜೊತೆಗೆ ದೆಹಲಿಯ ಜಾರಿ ನಿರ್ದೇಶನಾಲಯಕ್ಕೆ ಬಂದಿದ್ದರು. ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆಗೆ ಕರೆದಿತ್ತು.

ಪತಿ-ಪತ್ನಿ ಜತೆಗೂಡಿ ಜಾರಿ ನಿರ್ದೇಶನಾಲಯದ ಕೋರ್ಟ್ ಆವರಣಕ್ಕೆ ಬಂದಾಗ ಸಹಜವಾಗಿ ಎಲ್ಲರ ಕಣ್ಣು ಇವರಿಬ್ಬರ ಮೇಲೆ ನೆಟ್ಟಿತು. ಮಾಧ್ಯಮಗಳ ಕ್ಯಾಮರಾಗಳು ಸುತ್ತುವರೆದವು. ಕುಟುಂಬದಲ್ಲಿ ಒಗ್ಗಟ್ಟಿದೆ, ಪತಿಗೆ ಯಾವಾಗಲೂ ಬೆಂಬಲವಾಗಿ ಇರುತ್ತೇನೆ ಎಂಬುದನ್ನು ತೋರಿಸುವಂತೆ ಇತ್ತು ರಾಬಾರ್ಟ್ ವಾದ್ರಾ ಜೊತೆಗೆ ಪ್ರಿಯಾಂಕಾ ಗಾಂಧಿ ಆಗಮನ.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಿಯಾಂಕಾ ಗಾಂಧಿಯವರನ್ನು ಮಾತನಾಡಿಸಿದಾಗ, ''ನಾನು ಏನು ಹೇಳಲಿ, ಅವರು ನನ್ನ ಪತಿ, ನನ್ನ ಕುಟುಂಬವನ್ನು ನಾನು ಬೆಂಬಲಿಸುತ್ತೇನೆ'' ಎಂದು ಪ್ರಿಯಾಂಕಾ ಹೇಳಿದರು. ದೆಹಲಿಯ ಜಮ್ನಗರ್ ಹೌಸ್ ನಲ್ಲಿರುವ ಇಡಿ ಕಚೇರಿ ಮುಂದೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು. 2014ರಲ್ಲಿ ಸಹ ಬಿಜೆಪಿ ರಾಬರ್ಟ್ ವಾದ್ರಾ ಅವರನ್ನು ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿದ್ದಾಗ ಪ್ರಿಯಾಂಕಾ ಗಾಂಧಿ ಪತಿಯ ರಕ್ಷಣೆಗೆ ನಿಂತಿದ್ದರು.

ಇಡಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಪ್ರಿಯಾಂಕಾ ಗಾಂಧಿ ನೇರವಾಗಿ ಹೋದದ್ದು ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಗೆ. ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಂಬಂಧ ಪಕ್ಷದ ಕೆಲ ನಾಯಕರ ಜೊತೆ ಮಾತುಕತೆ ನಡೆಸಿದರು. ಇಂದು ಎಲ್ಲಾ ರಾಜ್ಯಗಳ ರಾಜ್ಯಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದು ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಕಾರ್ಯತಂತ್ರ ಕುರಿತು ಚರ್ಚೆ ನಡೆಸಲಿದ್ದಾರೆ. ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಭಾಗವಹಿಸಲಿದ್ದಾರೆ.

ರಾಹುಲ್ ಗಾಂಧಿಯವರ ಕಚೇರಿಯ ಬಲಭಾಗದಲ್ಲಿರುವ ಕಚೇರಿಯಲ್ಲಿ ಕುಳಿತು ಸುಮಾರು 45 ನಿಮಿಷಗಳ ಕಾಲ ಪಕ್ಷದ ಪದಾಧಿಕಾರಿಗಳ ಜೊತೆ ಪ್ರಿಯಾಂಕಾ ಮಾತುಕತೆ ನಡೆಸಿದರು. ನಂತರ ತಮ್ಮ ಸೋದರ ರಾಹುಲ್ ಗಾಂಧಿ ಜೊತೆಗೂಡಿ ಉತ್ತರ ಪ್ರದೇಶ ಪಶ್ಚಿಮ ಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಜ್ಯೋತಿರಾಧಿತ್ಯ ಸಿಂಧ್ಯಾ ಸೇರಿದಂತೆ ಕೆಲವು ಮುಖಂಡರ ಜೊತೆ ಮಾತುಕತೆ ನಡೆಸಿದರು. ಇದೇ ತಿಂಗಳ 10 ಅಥವಾ 11ರಂದು ಪ್ರಿಯಾಂಕಾ ಗಾಂಧಿ ಲಕ್ನೊದಲ್ಲಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com