ತಮ್ಮ ಪ್ರತಿಮೆ ನಿರ್ಮಾಣದ ಸಂಪೂರ್ಣ ವೆಚ್ಚ ಮಾಯಾವತಿ ನೀಡಬೇಕು: ಸುಪ್ರೀಂ ಕೋರ್ಟ್

ತಮ್ಮ ಸರ್ಕಾರದ ಅವಧಿಯಲ್ಲಿ ಮಾಯಾವತಿ ನೇತೃತ್ವ ಬಿಎಸ್ ಪಿ ಸರ್ಕಾರ ಪ್ರತಿಮೆ ಪುತ್ಥಳಿ ನಿರ್ಮಾಣಕ್ಕೆ ಮಾಡಿದ್ದ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ತಮ್ಮ ಸರ್ಕಾರದ ಅವಧಿಯಲ್ಲಿ ಮಾಯಾವತಿ ನೇತೃತ್ವ ಬಿಎಸ್ ಪಿ ಸರ್ಕಾರ ತಮ್ಮದೇ ಪ್ರತಿಮೆ ಪುತ್ಥಳಿ ನಿರ್ಮಾಣಕ್ಕೆ ಮಾಡಿದ್ದ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಲಖನೌ ಹಾಗೂ ನೋಯ್ಡಾದಲ್ಲಿ ತಮ್ಮ ಬಹುಜನ ಸಮಾಜ ಪಕ್ಷದ ಚಿಹ್ನೆ ಆನೆಯ ಪುತ್ಥಳಿಯನ್ನು ಸಾರ್ವಜನಿಕ ಹಣದಲ್ಲಿ ಸ್ಥಾಪನೆ ಮಾಡಿದ್ದ ಮಾಯಾವತಿ, ಆ ಹಣವನ್ನು ಹಿಂತಿರುಗಿಸಬೇಕು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ. ತಮ್ಮ ಸ್ವಂತ ಪುತ್ಥಳಿ ಹಾಗೂ ಯಾವುದೇ ಪಕ್ಷದ ಚಿಹ್ನೆಯನ್ನು ಸಾರ್ವಜನಿಕ ಹಣದಲ್ಲಿ ನಿರ್ಮಿಸಬಾರದು ಎಂದು ವಕೀಲರೊಬ್ಬರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು. 
ಈ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, 'ನಮ್ಮ ಸದ್ಯದ ದೃಷ್ಟಿಕೋನದ ಪ್ರಕಾರ ಮಾಯಾವತಿ ತಮ್ಮ ಹಾಗೂ ಪಕ್ಷದ ಚಿಹ್ನೆಯ ಪುತ್ಥಳಿಯನ್ನು ನಿರ್ಮಿಸಿ, ರಾಜ್ಯ ಸರ್ಕಾರಕ್ಕೆ ಹೊರೆಯಾಗುವಂತೆ ಮಾಡಿದ್ದಾರೆ. ಆ ಸಾರ್ವಜನಿಕ ಹಣವನ್ನು ಅವರೇ ವಾಪಸ್ ನೀಡಬೇಕು ಎಂದು ಹೇಳಿದರು. 
ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ, ಸಂಜೀವ್ ಖನ್ನಾ ಕೂಡ ಇದ್ದರು. 
ಈ ಅರ್ಜಿಯ ಮುಂದಿನ ವಿಚಾರಣೆ ಏಪ್ರಿಲ್ ಎರಡರಂದು ನಡೆಯುವುದು. ಸದ್ಯಕ್ಕೆ ವ್ಯಕ್ತವಾಗಿರುವ ಈ ಅಭಿಪ್ರಾಯವನ್ನು ಮತ್ತೆ ವಿಚಾರಣೆ ಮಾಡಲಾಗುವುದು ಎಂದೂ ಕೋರ್ಟ್ ಹೇಳಿದೆ. ಈ ಅರ್ಜಿಯ ಅಂತಿಮ ವಿಚಾರಣೆ ಏಪ್ರಿಲ್ 2ರಂದು ಮಾಡಲಾಗುವುದು ಎಂದು ಪೀಠ ಹೇಳಿದೆ. ಆದರೆ ಲೋಕಸಭಾ ಚುನಾವಣೆ ಪೂರ್ಣಗೊಂಡ ನಂತರ ಮೇ ತಿಂಗಳಲ್ಲಿ ವಿಚಾರಣೆ ನಡೆಸಲು ಸಾಧ್ಯವೇ ಎಂದು ಬಹುಜನ ಸಮಾಜ ಪಕ್ಷದ ವಕೀಲರಾದ ಸತೀಶ್ ಮಿಶ್ರಾ ಕೇಳಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com