ಪ್ರಧಾನಿ ಮೋದಿ ಕದ್ದುಮುಚ್ಚಿ ಅನಿಲ್ ಅಂಬಾನಿಗೆ ವಾಯುಪಡೆಯ 30 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ: ರಾಹುಲ್ ಗಾಂಧಿ

ರಫೆಲ್ ಯುದ್ಧ ವಿಮಾನ ರಕ್ಷಣಾ ಒಪ್ಪಂದ ವಿಚಾರದಲ್ಲಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿ...
ಸುದ್ದಿಗೋಷ್ಠಿಯಲ್ಲಿ ವರದಿ ತೋರಿಸುತ್ತಿರುವ ರಾಹುಲ್ ಗಾಂಧಿ
ಸುದ್ದಿಗೋಷ್ಠಿಯಲ್ಲಿ ವರದಿ ತೋರಿಸುತ್ತಿರುವ ರಾಹುಲ್ ಗಾಂಧಿ

ನವದೆಹಲಿ: ರಫೆಲ್ ಯುದ್ಧ ವಿಮಾನ ರಕ್ಷಣಾ ಒಪ್ಪಂದ ವಿಚಾರದಲ್ಲಿ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನ ಮಂತ್ರಿ ಕಚೇರಿ ಭಾಗಿಯಾಗಿದೆ ಎಂಬ ಮಾಧ್ಯಮವೊಂದರ ತನಿಖಾ ವರದಿಯನ್ನು ಇಟ್ಟುಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನ ಮಂತ್ರಿ ಕಚೇರಿಯಿಂದ ರಹಸ್ಯವಾಗಿ ಸಮಾನಾಂತರ ಮಾತುಕತೆ(Parellel negotiation) ನಡೆದಿದೆ ಎಂದು ಪತ್ರಿಕೆಯಲ್ಲಿ ಬಂದಿರುವ ವರದಿಗಳನ್ನು ನೋಡಿದಾಗ ರಫೆಲ್ ಹಗರಣದಲ್ಲಿ ನರೇಂದ್ರ ಮೋದಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ರಫೆಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಪ್ರಧಾನಿ ಮೋದಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕಳೆದೊಂದು ವರ್ಷದಿಂದ ನಾವು ಹೇಳುತ್ತಾ ಬಂದಿದ್ದೇವೆ. ಪ್ರಧಾನಿಯವರೇ ಸ್ವತಃ ಸಮಾನಾಂತರ ಒಪ್ಪಂದ ನಡೆಸಿದ್ದಾರೆ ಎಂದು ಮಾಧ್ಯಮದ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಧಾನ ಮಂತ್ರಿಗಳು ಮಾತುಕತೆಯಲ್ಲಿ ಏಕೆ ಭಾಗಿಯಾಗಿದ್ದಾರೆ, ದೇಶದ ಜನತೆಯ ಹಿತಕ್ಕಾಗಿಯೇ, ಖಂಡಿತಾ ಅಲ್ಲ, ಅನಿಲ್ ಅಂಬಾನಿಗೋಸ್ಕರ. ಅದರರ್ಥ ಚೌಕಿದಾರ ಒಬ್ಬ ಕಳ್ಳ. ಮೋದಿಯವರು ವಾಯುಪಡೆಯಿಂದ 30 ಸಾವಿರ ಕೋಟಿ ರೂಪಾಯಿ ಕದ್ದು ಅದನ್ನು ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ರಫೆಲ್ ಒಪ್ಪಂದದ ಬಗ್ಗೆ ಸರ್ಕಾರ ಅಷ್ಟೊಂದು ಸುಳ್ಳು ಏಕೆ ಹೇಳಿತ್ತು ಎಂದು ನನಗೆ ಆಶ್ಚರ್ಯವಾಗುತ್ತಿತ್ತು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಸುಳ್ಳು ಹೇಳಿದ್ದಾರೆ. ಅನಿಲ್ ಅಂಬಾನಿಯವರನ್ನು ಪ್ರಧಾನಿ ಮೋದಿಯವರೇ ಆಯ್ಕೆ ಮಾಡಿಕೊಂಡರು ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷರು ಒಪ್ಪಿಕೊಂಡಿದ್ದಾರೆ. 5 ವರ್ಷಗಳ ಎನ್ ಡಿಎ ಅಧಿಕಾರದಲ್ಲಿ ಒಂದೇ ಒಂದು ರಕ್ಷಣಾ ಒಪ್ಪಂದ ಪ್ರಾಮಾಣಿಕವಾಗಿ ನಡೆದಿಲ್ಲ ಎಂದರು.
ಚೋರ್, ಚೌಕಿದಾರ ಎಂದು ಮೋದಿಯವರು ಬಹುಶಃ ಅವರ ಬಗ್ಗೆಯೇ ಹೇಳಿಕೊಳ್ಳುತ್ತಾರೆ. ಅವರಲ್ಲಿ ಎರಡು ಬಗೆಯ ವ್ಯಕ್ತಿತ್ವವಿರಬೇಕು. ಒಂದು ದಿನ ಚೌಕಿದಾರನಾಗುವ ಮೋದಿ ಮತ್ತೊಂದು ದಿನ ಚೋರ್ ಆಗುತ್ತಾರೆ. ಅವರು ಸ್ಕೀಝೋಫ್ರೀನಿಯಾದಿಂದ ಬಳಲುತ್ತಿರಬೇಕು ಎಂದು ಟೀಕಿಸಿದರು.



ಭಾರತ ಮತ್ತು ಫ್ರಾನ್ಸ್ ನಡುವೆ ನಡೆದ ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಫ್ರಾನ್ಸ್ ನೊಂದಿಗೆ ಪ್ರಧಾನ ಮಂತ್ರಿ ಕಾರ್ಯಾಲಯ ನಡೆಸಿದ್ದ ಸಮಾನಾಂತರ ಮಾತುಕತೆಗೆ ರಕ್ಷಣಾ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಗೋವಾ ಸಿಎಂ ಮನೋಹರ್ ಪರ್ರಿಕರ್ ಭೇಟಿ ಮಾಡಿದಾಗ ರಫೆಲ್ ಒಪ್ಪಂದದ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಅವರ ಆರೋಗ್ಯ ವಿಚಾರಿಸಿ ಬಂದೆ, ಹಾಗೆಂದು ನಾನು ರಫೆಲ್ ವಿಷಯ ಮಾತನಾಡುವುದಿಲ್ಲ ಎಂದರ್ಥವಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ರಫೆಲ್ ಬೆಲೆಯ ಬಗ್ಗೆ ಮಾತುಕತೆ ನಡೆಸಿಲ್ಲ:
ರಫೆಲ್ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಅದರ ಬೆಲೆ ಬಗ್ಗೆ ಮಾತುಕತೆ ನಡೆಸಿಲ್ಲ ಎಂದು ರಕ್ಷಣಾ ಇಲಾಖೆ ಮಾಜಿ ಕಾರ್ಯದರ್ಶಿ ಜಿ ಮೋಹನ್ ಕುಮಾರ್ ಹೇಳಿದ್ದಾರೆ.

ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಪ್ರಧಾನಿ ಮೋದಿಯವರೇ ನೇರವಾಗಿ ಭಾಗಿಯಾಗಿದ್ದಾರೆ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ವರದಿ ಬಗ್ಗೆ ಎಎನ್ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಅವರು, ಯುದ್ಧ ವಿಮಾನ ಖರೀದಿಯ ಬೆಲೆಯ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಮಾತುಕತೆ ನಡೆಸಿರಲಿಲ್ಲ. ಯುದ್ಧ ವಿಮಾನದ ಖಾತರಿ ಹಾಗೂ ಸಾಮಾನ್ಯ ನಿಯಮ ಮತ್ತು ಷರತ್ತುಗಳ ಬಗ್ಗೆ ಮಾತುಕತೆ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com