ಚಂದ್ರಬಾಬು ನಾಯ್ಡು ಎನ್ ಟಿಆರ್ ಗೆ ವಿಶ್ವಾಸದ್ರೋಹ ಮಾಡಿದ್ದಾರೆ: ಪ್ರಧಾನಿ ನರೇಂದ್ರ ಮೋದಿ

ರಾಜ್ಯದ ಅಭಿವೃದ್ಧಿಗೆ ನೀಡಿದ್ದ ಭರವಸೆಗಳ ವಿಚಾರದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಯೂಟರ್ನ್ ಹೊಡೆದಿದ್ದಾರೆ. ಅಲ್ಲದೆ ...
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಗುಂಟೂರು: ರಾಜ್ಯದ ಅಭಿವೃದ್ಧಿಗೆ ನೀಡಿದ್ದ ಭರವಸೆಗಳ ವಿಚಾರದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಯೂಟರ್ನ್ ಹೊಡೆದಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳು ಹಿಂದಿನ ಯೋಜನೆಗಳನ್ನೇ ಪುನರಾವರ್ತಿಸುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಜೊತೆಗೆ ಚಂದ್ರಬಾಬು ನಾಯ್ಡು ಅವರ ಮೈತ್ರಿಯನ್ನು ಟೀಕಿಸಿದ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ ಆಂಧ್ರ ಪ್ರದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಪಕ್ಷವನ್ನು ಸ್ಥಾಪಿಸಿದರು. ಆದರೆ ಅವರ ಅಳಿಯವಾಗಿ ಚಂದ್ರಬಾಬು ನಾಯ್ಡು ಪದೇ ಪದೇ ಮೈತ್ರಿಯನ್ನು ಬದಲಾಯಿಸುತ್ತಾ, ಚುನಾವಣೆಗಳಲ್ಲಿ ಸೋಲುತ್ತಾ ತಮ್ಮ ಮಾವ ಎನ್ ಟಿಆರ್ ರವರ ಕನಸು, ಆಸೆಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ ಎಂದರು.

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ನಾಯ್ಡು ನನಗಿಂತ ಹಿರಿಯರು ಎಂದು ಪದೇ ಪದೇ ನೆನಪಿಸುತ್ತಾ ಇರುತ್ತಾರೆ, ಅದರಲ್ಲಿ ಸಂಶಯವಿಲ್ಲ. ನೀವು ಹಿರಿಯರಾಗಿರುವುದರಿಂದಲೇ ನಾನು ಎಂದಿಗೂ ನಿಮ್ಮ ಜೊತೆ ಅಗೌರವದಿಂದ ನಡೆದುಕೊಂಡಿಲ್ಲ. ಮೈತ್ರಿ ಬದಲಾಯಿಸುವುದರಲ್ಲಿ ನೀವು ದೊಡ್ಡವರು. ಇಂದು ನಿಂದಿಸಿದವರ ಜೊತೆ ನಾಳೆ ಒಂದಾಗುತ್ತೀರಿ, ಹಿರಿಯರಾಗಿ ನೀವು ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಗೆ ಸೋಲುತ್ತಿದ್ದೀರಿ, ಆದರೆ ನಾನು ಹಾಗಲ್ಲ ಎಂದು ಟೀಕಿಸಿದರು.

ಆಂಧ್ರ ಪ್ರದೇಶದಲ್ಲಿ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡಿದ ಹಣದ ಪ್ರತಿ ಪೈಸೆಯ ಲೆಕ್ಕಾಚಾರ ಕೇಳಿದ ದಿನದಿಂದ ನಾಯ್ಡು ತಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ, ಎನ್ ಟಿಆರ್ ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದಾಗಿ ನಾಯ್ಡು ಮಾತು ಕೊಟ್ಟಿದ್ದಾರೆ, ಆದರೆ ತಮ್ಮ ಮಾತಿಗೆ ಬದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಯೇ ಎಂದು ಮೋದಿ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರವಿದ್ದಾಗ ಅದರ ಆಡಳಿತ ವೈಖರಿ ರಾಜ್ಯಗಳಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಎನ್ ಟಿಆರ್ ಅವರು ಆಂಧ್ರ ಪ್ರದೇಶವನ್ನು ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲು ಟಿಡಿಪಿಯನ್ನು ಸ್ಥಾಪಿಸಿದರು. ಅಧಿಕಾರ ಮತ್ತು ಹಣವುಳ್ಳ ಜನರ ಸಿಟ್ಟನ್ನು ತಡೆಯಬೇಕಾದ ಟಿಡಿಪಿ ನಾಯಕರು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಟೀಕಿಸಿದರು.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com