ರಾಫೆಲ್ ವಿವಾದ: ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶ ಕೈಬಿಟ್ಟಿದ್ದೇಕೆ: ಕಾಂಗ್ರೆಸ್ ಪ್ರಶ್ನೆ

ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತೆ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ರಾಫೆಲ್ ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳನ್ನು ಕೈ ಬಿಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತೆ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ರಾಫೆಲ್ ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳನ್ನು ಕೈ ಬಿಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದೆ.
ರಾಫೆಲ್ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದಿ ಹಿಂದೂ ಪತ್ರಿಕೆ ಬಿಡುಗಡೆ ಮಾಡಿದ್ದ ರಹಸ್ಯ ತನಿಖಾ ವರದಿಯನ್ನಾಧರಿಸಿ ಕಾಂಗ್ರೆಸ್ ಮತ್ತೆ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಭದ್ರತಾ ಒಪ್ಪಂದಗಳಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳನ್ನು ಕೈ ಬಿಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು, ರಾಫೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಾಕಷ್ಟು ತಪ್ಪು ನಿರ್ಣಯಗಳನ್ನು ಕೈಗೊಂಡಿದ್ದು, 126 ಯುದ್ಧ ವಿಮಾನಗಳಿಗೆ ತಗುಲುವ ವೆಚ್ಚವನ್ನು ಕೇವಲ 36 ವಿಮಾನಗಳಿಗೆ ನೀಡಿ ಡಸ್ಸಾಲ್ಟ್ ಸಂಸ್ಛೆಗೆ ಆಜೀವ ಪರ್ಯಂತ ಲಾಭ ನೀಡಿದೆ. ಅಲ್ಲದೆ ಪ್ರಧಾನಿ ಕಚೇರಿ ಫ್ರಾನ್ಸ್ ಮೂಲದ ಡಸ್ಸಾಲ್ಟ್ ಏವಿಯೇಷನ್ ನೊಂದಿಗೆ ಖಾಸಗಿ ಚರ್ಚೆ ಗಳನ್ನು ನಡೆಸಿದ್ದು, ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳೂ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಕೈ ಬಿಡಲಾಗಿದೆ.
ಸರ್ಕಾರಿ ವ್ಯವಹಾರದಲ್ಲಿ ಪಿಎಂಒ ಖಾಸಗಿಯಾಗಿ ಚರ್ಚೆ ನಡೆಸುವ ಅವಶ್ಯಕತೆಯಾದರೂ ಏನಿತ್ತು. ಒಪ್ಪಂದದಲ್ಲಿ ಯಾವುದೇ ಅಧಿಕೃತ ಖಾತರಿ ಇಲ್ಲ, ಯಾವುದೇ ಬ್ಯಾಂಕಿನ ಖಾತರಿ ಇಲ್ಲ, ಅಧಿಕೃತ ಸ್ವೀಕೃತಿದಾರನೂ ಇಲ್ಲ. ಆದರೂ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆದಿದೆ. ಇದರಿಂದಲೇ ಒಪ್ಪಂದದಲ್ಲಿ ಮೋದಿ ಮತ್ತು ಸಂಗಡಿಗರಿಗೆ ಕಿಕ್ ಬ್ಯಾಕ್ ಬಂದಿದೆ ಎಂಬುದು ತಿಳಿಯುತ್ತದೆ ಎಂದು ಚಿದಂಬರಂ ಹೇಳಿದ್ದಾರೆ.
ಇನ್ನು ಈ ಹಿಂದೆ ಹಿಂದೂ ಪತ್ರಿಕೆ ಮಾಡಿದ್ದ ರಾಫೆಲ್ ಒಪ್ಪಂದದ ರಹಸ್ಯ ವರದಿಯಲ್ಲಿ ಕೇಂದ್ರ ಸರ್ಕಾರ ರಾಫೆಲ್ ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಮತ್ತು ಅಧಿಕೃತ ಖಾತೆಯಿಂದಲೇ ಹಣ ಪಾವತಿಯಂತಹ ಪ್ರಮುಖ ಅಂಶಗಳನ್ನು ಕೈ ಬಿಟ್ಟಿದೆ ಎಂದು ಹೇಳಲಾಗಿತ್ತು. ಈ ಅಂಶ ಇದೀಗ ಮತ್ತೆ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಮತ್ತೊಂದು ಹಂತದ ಜಂಗೀ ಕುಸ್ತಿಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com