ದೆಹಲಿ ಆಯ್ತು ಈಗ ಪುದುಚೇರಿ ಸರದಿ, ರಾಜ್ಯಪಾಲ ಕಿರಣ್ ಬೇಡಿ ವಿರುದ್ಧ ಸಿಎಂ ನಾರಾಯಣ ಸ್ವಾಮಿ ಕಿಡಿ

ದೆಹಲಿ ಬಳಿಕ ಇದೀಗ ಮತ್ತೊಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಂಡಿಚೇರಿ: ದೆಹಲಿ ಬಳಿಕ ಇದೀಗ ಮತ್ತೊಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಆರಂಭವಾಗಿದೆ.
ರಾಜ್ಯಪಾಲೆ ಕಿರಣ್ ಬೇಡಿ ಅವರ ವರ್ತನೆಗೆ ಪುದುಚೇರಿ ಸಿಎಂ ನಾರಾಯಣ ಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದು, 'ರಾಜ್ಯಪಾಲರಾದ ಕಿರಣ್‌ ಬೇಡಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ. ಅಲ್ಲದೆ ಅವರ ನಿವಾಸದ ಎದುರು ಧರಣಿ ಕೂಡ ನಡೆಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ತಮ್ಮ ತಮ್ಮ ಕಚೇರಿಗಳಿಂದ ಹೊರಟ ಸಂಪುಟ ಸಹೋದ್ಯೋಗಿಗಳೊಂದಿಗೆ ರಾಜ್ಯಪಾಲರ ಗೃಹ ಕಚೇರಿ ರಾಜ್‌ ನಿವಾಸದ ಬಳಿ ಮಧ್ಯಾಹ್ನ ಬಂದ ಮುಖ್ಯಮಂತ್ರಿ ನಾರಾಯಣಸ್ವಾಮಿ, ರಾತ್ರಿಯಿಡೀ ಧರಣಿ ನಡೆಸಿದರು. ಧರಣಿ ನಡೆಸುತ್ತಿದ್ದ ಸ್ಥಳದ ಬಳಿಯ ರಸ್ತೆಯಲ್ಲಿಯೇ ಊಟ ಮಾಡಿದ ಅವರು, ಕೆಲವು ಕಡತಗಳನ್ನು ಅದೇ ಸ್ಥಳದಲ್ಲಿ ವಿಲೇವಾರಿ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಕಿರಣ್ ಬೇಡಿ ಅವರು ಅನಗತ್ಯವಾಗಿ ಸರ್ಕಾರದ ವಿಚಾರಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಸಲೆಂದೇ ಅವರು ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲವೂ ಇದೆ. ರಾಜ್ಯಪಾಲರು ಸಚಿವ ಸಂಪುಟ ಅನುಮೋದನೆ ನೀಡಿದ ಕಡತಗಳಿಗೆ ಸಹಿ ಹಾಕುವುದಷ್ಟೇ ಅವರ ಕೆಲಸ. ಸಚಿವ ಸಂಪುಟ ಅನುಮೋದನೆ ನೀಡಿದ ವಿಚಾರಗಳನ್ನು ಅವರು ಪ್ರಶ್ನಿಸುವಂತಿಲ್ಲ. ಕಿರಣ್ ಬೇಡಿ ಅವರು ಸಂವಿಧಾನದತ್ತ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಕಿಡಿಕಾರಿದರು.
ಈ ಹಿಂದೆ ಸರ್ಕಾರದ ಹಲವು ನಿರ್ಣಯಗಳನ್ನು ಬಹಿರಂಗವಾಗಿಯೇ ಟೀಕಿಸಿದ್ದ ಕಿರಣ್ ಬೇಡಿ ಅವರು, ಹೆಲ್ಮೆಟ್ ಕಡ್ಡಾಯವೂ ಸೇರಿದಂತೆ ಸರ್ಕಾರದ ಹಲವು ನಿರ್ಣಯಗಳು ಸರಿಯಾಗಿ ಜಾರಿಯಾಗಿಲ್ಲ ಎಂದು ಕಿಡಿಕಾರಿದ್ದರು. ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಸಿಎಂ ನಾರಾಯಣಸ್ವಾಮಿ ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ ಜಾರಿಗೆ ತಾವು ಈಗಲೂ ಬದ್ಧ. ಆದರೆ ಇದು ಪೊಲೀಸ್ ನಿರ್ದೇಶಕರಿಗೆ ಸಂಬಂಧಿಸಿದ ವಿಚಾರವಾಗಿದ್ದು, ಹೆಲ್ಮೆಟ್ ಕಡ್ಡಾಯ ಜಾರಿಗೆ ಸಾಕಷ್ಟು ಸಮಸ್ಯೆಗಳಿವೆ. ಅವುಗಳೆಲ್ಲವನ್ನೂ ನಿವಾರಿಸಿಕೊಂಡು ಹಂತಹಂತವಾಗಿ ಪೂರ್ಣ ಮಟ್ಟದಲ್ಲಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com