ಪುಲ್ವಾಮಾ ಉಗ್ರ ದಾಳಿ; ದೇಶಾದ್ಯಂತ ಪ್ರತಿಭಟನೆ, ಅಂತಾರಾಷ್ಟ್ರೀಯ ಸಮುದಾಯಗಳಿಂದ ಖಂಡನೆ

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ...
ಭಯೋತ್ಪಾದಕ ದಾಳಿ ನಂತರ ಪುಲ್ವಾಮಾದಲ್ಲಿ ಕಂಡುಬಂದ ದೃಶ್ಯ
ಭಯೋತ್ಪಾದಕ ದಾಳಿ ನಂತರ ಪುಲ್ವಾಮಾದಲ್ಲಿ ಕಂಡುಬಂದ ದೃಶ್ಯ

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ಸುಮಾರು 40 ಭದ್ರತಾ ಪಡೆ ಯೋಧರು ಹುತಾತ್ಮರಾಗಿದ್ದು ವಿಧ್ವಂಸಕ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಸಿಆರ್ ಪಿಎಫ್ ಯೋಧರ ಸಾವಿಗೆ ಜಮ್ಮು-ಕಾಶ್ಮೀರದ ಯುವಕರು ತೀವ್ರ ದುಃಖ ವ್ಯಕ್ತಪಡಿಸುತ್ತಿದ್ದಾರೆ. 40 ಸಿಆರ್ ಪಿಎಫ್ ಜವಾನರನ್ನು ಕೊಂದ ಉಗ್ರರ ಕೃತ್ಯದ ವಿರುದ್ಧ ನಾವು ಪ್ರತಿಭಟನೆಗಿಳಿದಿದ್ದೇವೆ, ಇದೊಂದು ಹೇಯ ಕೃತ್ಯ. ಇನ್ನೊಂದು ಸರ್ಜಿಕಲ್ ಸ್ಟ್ರೈಕ್ ನ್ನು ಭಾರತದ ರಕ್ಷಣಾ ಇಲಾಖೆ ನಡೆಸಲು ಮುಂದಾಗಬೇಕು ಎಂದು ಜನತೆ ಒತ್ತಾಯಿಸುತ್ತಿದ್ದಾರೆ.
ಭೋಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಉಗ್ರರಿಗೆ ಪಾಕಿಸ್ತಾನ ಆಶ್ರಯ ಒದಗಿಸುತ್ತಿದ್ದು ಮೋದಿ ನೇತೃತ್ವದ ಸರ್ಕಾರ ಪಾಕಿಸ್ತಾನದ ವಿರುದ್ಧ ದಾಳಿ ನಡೆಸಿ ಅವರಿಗೊಂದು ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ಭಾರತದ ಭದ್ರತಾ ಪಡೆ ಯೋಧರ ಮೇಲೆ ನಡೆದ ಉಗ್ರರ ದಾಳಿಯನ್ನು ಹಲವು ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರವಾಗಿ ಖಂಡಿಸಿವೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಉಗ್ರರ ಕೃತ್ಯವನ್ನು ಬಲವಾಗಿ ಖಂಡಿಸಿದ್ದು ಭಯೋತ್ಪಾದನೆ ವಿರುದ್ಧ ಹೋರಾಡಲು ಬಾಂಗ್ಲಾದೇಶ ಬದ್ಧವಾಗಿದ್ದು ಉಗ್ರರ ಕೃತ್ಯಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.
ಆಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ಸೆದಿಖ್ ಸೆದ್ದಿಖಿ ಉಗ್ರಹ ಈ ಹೀನ ಕೃತ್ಯವನ್ನು ಖಂಡಿಸಿದ್ದಾರೆ. ಸಿಆರ್ ಪಿಎಫ್ ಯೋಧರ ಸಾವಿಗೆ ಕಾರಣವಾದ ಕಾಶ್ಮೀರ ಭಯೋತ್ಪಾದಕ ದಾಳಿಯ ವಿರುದ್ಧ ಹೋರಾಡಲು ನಾವು ಭಾರತಕ್ಕೆ ನೆರವಾಗುತ್ತೇವೆ ಎಂದಿದ್ದಾರೆ.

ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಫ್ರಾನ್ಸ್, ಮಾಲ್ಡೀವ್ಸ್, ಥೈಲ್ಯಾಂಡ್, ಶ್ರೀಲಂಕಾ, ಇಸ್ರೇಲ್, ಝೆಕ್ ಗಣರಾಜ್ಯ, ಕೆನಡಾ, ಯುಎಸ್ ದೇಶಗಳ ಉನ್ನತ ನಾಯಕರು ನಿನ್ನೆ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು ಭಾರತ ಸರ್ಕಾರದ ಜತೆ ಉಗ್ರರನ್ನು ಹತ್ತಿಕ್ಕುವಲ್ಲಿ ಯಾವುದೇ ರೀತಿಯ ನೆರವು ಒದಗಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com