ಬಾಂಬ್ ದಾಳಿ ನಡೆದ ಸ್ಥಳ
ಬಾಂಬ್ ದಾಳಿ ನಡೆದ ಸ್ಥಳ

ಸೈನಿಕರ ಐಡಿ ಕಾರ್ಡ್, ಆಧಾರ್ ಕಾರ್ಡ್ ನೆರವಿನಿಂದ ಹುತಾತ್ಮ ಯೋಧರ ಗುರುತು ಪತ್ತೆ

ಸಿಆರ್ ಪಿಎಫ್ ಯೋಧರನ್ನು ಆಧಾರ್ , ಐಡಿ ಕಾರ್ಡ್, ರಜೆ ಅಪ್ಲಿಕೇಷನ್ ಮತ್ತಿತರ ದಾಖಲೆಗಳಿಂದ ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಪುಲ್ವಾಮಾ ಭೀಕರ ಉಗ್ರರ ದಾಳಿಯಲ್ಲಿ ದೇಹ ಛಿದ್ರಗೊಂಡು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದಿದ್ದ ಸಿಆರ್ ಪಿಎಫ್ ಯೋಧರನ್ನು  ಆಧಾರ್ , ಐಡಿ ಕಾರ್ಡ್, ರಜೆ ಅಪ್ಲಿಕೇಷನ್ ಮತ್ತಿತರ ದಾಖಲೆಗಳಿಂದ ಪತ್ತೆ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮಾ ಜಿಲ್ಲೆಯಲ್ಲಿ  ಗುರುವಾರ ಸೈನಿಕರು ಸಂಚರಿಸುತ್ತಿದ್ದ ಬಸ್ ಮೇಲೆ 100 ಕೆಜಿ ಸ್ಟೋಟಕದೊಂದಿಗೆ ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯಲ್ಲಿ 40 ಮಂದಿ ವೀರ ಯೋಧರು ಹುತಾತ್ಮರಾಗಿದ್ದರು. ಘಟನೆಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದರು.

ಆರ್ ಡಿಎಕ್ಸ್ ಪ್ರಚೋದಿತ ಸ್ಪೋಟದ ಪರಿಣಾಮದಿಂದಾಗಿ ಸೈನಿಕರ ದೇಹಗಳು ಛಿದ್ರಗೊಂಡು ಸುಟ್ಟುಕರಕಲಾಗಿದ್ದ ಮೃತದೇಹಗಳ ಗುರುತನ್ನು ಕಂಡುಹಿಡಿಯಲು ಬಹಳ ಕಷ್ಟವಾಗಿತ್ತು.  ಬಹುತೇಕ  ಯೋಧರನ್ನು ಅವರ  ಪಾಕೆಟ್ ಹಾಗೂ ಬ್ಯಾಗ್ ನಲ್ಲಿದ್ದ  ಗುರುತಿನ ಕಾರ್ಡ್, ಆಧಾರ್, ಪ್ಯಾನ್ ಕಾರ್ಡ್ ಮತ್ತಿತರ ದಾಖಲೆಗಳಿಂದ ಪತ್ತೆ ಹಚ್ಚಲಾಯಿತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಹುತಾತ್ಮ ಯೋಧರೆಲ್ಲರ ಗುರುತು ಪತ್ತೆ ಹಚ್ಚಿ ಅವರ ಕುಟುಂಬ ವರ್ಗಕ್ಕೆ  ಮಾಹಿತಿ ಮುಟ್ಟಿಸಲಾಯಿತು. ಈ ತಂಡದಲ್ಲಿದ್ದ ಒಬ್ಬರು ದೆಹಲಿಯಲ್ಲಿದ್ದರೆ ಮತ್ತೊಬ್ಬರು ತುರ್ತು ಕೆಲಸದ ನಿಮಿತ್ತ  ಕೊನೆಯ ಕ್ಷಣದಲ್ಲಿ ಪ್ರಯಾಣವನ್ನು ರದ್ದುಗೊಳಿಸಿದ್ದರಿಂದ ಸಾವಿನಿಂದ ಪಾರಾಗಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ.

ಮೃತದೇಹಗಳು ಛಿದ್ರಗೊಂಡಿದ್ದರಿಂದ ಮೃತರ ಸಂಖ್ಯೆಯನ್ನು ನಿರ್ದಿಷ್ಟಪಡಿಸುವಲ್ಲಿ ವೈದ್ಯರಿಗೆ ಧೀರ್ಘ ಸಮಯ ಬೇಕಾಯಿತು. ಸ್ಟೋಟ ನಡೆದ ಸ್ಥಳದಲ್ಲಿ ಬಿದಿದ್ದ ದೇಹಗಳನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ನಡೆಸಿ ಸೈನಿಕರ ಗುರುತು ಪತ್ತೆ ಹಚ್ಚಲಾಯಿತು ಎಂದು ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com