ತ್ರಿವರ್ಣ ಧ್ವಜ ಹಾರಿಸಿದ್ದಕ್ಕಿಂತ, ಹೊದಿಸಿದ್ದೇ ಹೆಚ್ಚು: ಮೋದಿ ಸರ್ಕಾರದ ವಿರುದ್ದ ಶಿವಸೇನೆ ಟೀಕೆ

ಕೇಂದ್ರ ಸರ್ಕಾರ ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಿಂತ ಸೈನಿಕರ ಪಾರ್ಥೀವ ಶರೀರದ ಮೇಲೆ ಹೊದಿಸಿದ್ದೇ ಹೆಚ್ಚು ಎಂದು ಹೇಳುವ ಮೂಲಕ ಶಿವಸೇನೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಕೇಂದ್ರ ಸರ್ಕಾರ ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಿಂತ ಸೈನಿಕರ ಪಾರ್ಥೀವ ಶರೀರದ ಮೇಲೆ ಹೊದಿಸಿದ್ದೇ ಹೆಚ್ಚು ಎಂದು ಹೇಳುವ ಮೂಲಕ ಶಿವಸೇನೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದೆ.
ದೇಶದ ಕೀರ್ತಿ ಮತ್ತು ಗೌರವದ ಪ್ರತೀಕವಾಗಿರುವ ತ್ರಿವರ್ಣ ಧ್ವಜವನ್ನು ಕೇಂದ್ರ ಸರ್ಕಾರ ಹಾರಿಸಿದ್ದಕ್ಕಿಂತ ಯೋಧರ ಪಾರ್ಥೀವ ಶರೀರದ ಮೇಲೆ ಹೊದಿಸಿದ್ದೇ ಹೆಚ್ಚು. ಇಲ್ಲಿ ಯಾವುದೇ ರೀತಿಯ ಯುದ್ಧ ನಡೆಯುತ್ತಿಲ್ಲ. ಆದರೂ ಕೇಂದ್ರ ಸರ್ಕಾರದ ಅಸಮರ್ಥತೆಯಿಂದಾಗಿ ದೇಶದ ಗಡಿ ಕಾಯುತ್ತಿರುವ ಯೋಧರು ಶತ್ರುಗಳ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.
ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಪ್ರಕಟಿಸಿರುವ ಶಿವಸೇನೆ, ಪುಲ್ವಾಮ ಉಗ್ರ ದಾಳಿಗೆ ಕೇಂದ್ರ ಸರ್ಕಾರದ ಅಸಮರ್ಥತೆಯೇ ಕಾರಣ ಎಂದು ಟೀಕಿಸಿದೆ. ಕೇಂದ್ರ ಸರ್ಕಾರ ತನ್ನ ಅಸಮರ್ಥತೆಯನ್ನು ಮುಚ್ಚಿಹಾಕಲು ಈ ಹಿಂದಿನ ಸರ್ಕಾರಗಳನ್ನು ದೂಷಣೆ ಮಾಡುತ್ತಿದೆ. ಈ ಹಿಂದೆ ಇದೇ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಉಗ್ರದಾಳಿ ಸಂಬಂಧ ಅಂದಿನ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು. ಭಯೋತ್ಪಾದನೆ ತಡೆಯುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದರು. ಆದರೆ ಇದೀಗ ಅದೇ ನರೇಂದ್ರ ಮೋದಿ ಅವರೇ ಪ್ರಧಾನಿ ಹುದ್ದೆಯಲ್ಲಿದ್ದಾರೆ, ತಮ್ಮದೇ ಪಕ್ಷ ಅಧಿಕಾರದಲ್ಲಿದೆ. ಆದರೂ ಉಗ್ರ ದಾಳಿ ಮಾತ್ರ ನಿಂತಿಲ್ಲ ಎಂದು ಶಿವಸೇನೆ ಕಿಡಿಕಾರಿದೆ.
ಅಂತೆಯೇ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿರುವ ಶಿವಸೇನೆ, ಈಗ ಒಬ್ಬರ ಮೇಲೆ ಒಬ್ಬರು ಕೆಸರೆರಚಿಕೊಳ್ಳುವ ಸಮಯ ಅಲ್ಲ, ಎಲ್ಲರೂ ನಮ್ಮ ಸೇನೆಗೆ ನೈತಿಕ ಬೆಂಬಲ ನೀಡಿ, ಶತ್ರುಗಳ ವಿರುದ್ಧ ಸಿಡಿದೇಳುವಂತೆ ಮಾಡಬೇಕು. ಹುತಾತ್ಮ ಯೋಧರ ಕುಟುಂಬಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಯೋಧರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಶಿವಸೇನೆ ಹೇಳಿದೆ.
ಅಲ್ಲದೆ ಮೋದಿ ಸರ್ಕಾರ ಕೂಡ 1971ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ತೆಗೆದುಕೊಂಡಿದ್ದ ದಿಟ್ಟ ನಿರ್ಣಯದಂತೆಯೇ ಮೋದಿ ಸರ್ಕಾರ ಕೂಡ ದಿಟ್ಟ ನಿರ್ಣಯ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಲೂಚಿಸ್ಥಾನವನ್ನು ಸ್ವತಂತ್ರ್ಯವಾಗಿಸಬೇಕು ಎಂದು ಹೇಳಿದೆ. 
1971ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ಹಾಗೂ ನಾಗರೀಕರ ನಡುವಿನ ಸಂಘರ್ಷದ ಸಂದರ್ಭದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಭಾರತೀಯ ಸೇನೆಯನ್ನು ರವಾನಿಸಿ ಪಾಕಿಸ್ತಾನಿ ಸೈನಿಕರನ್ನು ಮಣಿಸಿ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶವನ್ನು ಸ್ವತಂತ್ರ ದೇಶವಾಗವಂತೆ ಮಾಡಿದ್ದರು. ಅಂದು ಭಾರತೀಯ ಸೇನೆಯ ಪರಾಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಪಾಕ್ ಸೈನಿಕರು ಮಂಡಿಯೂರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com