ಸಿಜೆಐ ಹೆಸರಿನಲ್ಲಿ ತೆಲಂಗಾಣ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕರೆ

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕೆಂದು...
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಾಲಯ ನೀಡಿದ್ದ ಆದೇಶವನ್ನು ತಿರುಚಿದ ಆರೋಪದ ಮೇಲೆ ಇಬ್ಬರು ನೌಕರರನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಎಂದು ಹೇಳಿಕೊಂಡು ಕರ್ನಾಟಕ ಮತ್ತು ತೆಲಂಗಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಕರೆ ಬಂದಿದೆ.

ಅದರಲ್ಲಿ ಕೆಲವು ವಕೀಲರಿಗೆ ನ್ಯಾಯಾಧೀಶರನ್ನಾಗಿ ಬಡ್ತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಇಬ್ಬರು ನ್ಯಾಯಾಧೀಶರ ಮಧ್ಯೆ ಮಾತುಕತೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿಗಳು ಆದೇಶ ನೀಡಿದ್ದಾರೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.

ದೂರಿನಲ್ಲಿ, ಫೋನ್ ಕರೆ ಮಾಡಿದವರು ಮುಖ್ಯ ನ್ಯಾಯಮೂರ್ತಿಗಳ ಧ್ವನಿಯಲ್ಲಿ ತೆಲಂಗಾಣ ರಾಜ್ಯ ಮುಖ್ಯ ನ್ಯಾಯಮೂರ್ತಿ ಬಿ ರಾಧಾಕೃಷ್ಣನ್ ಮತ್ತು ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್ ನಾರಾಯಣ ಸ್ವಾಮಿ ಅವರಿಗೆ ಕರೆ ಮಾಡಿ ಕೆಲವು ವಕೀಲರ ಹೆಸರುಗಳನ್ನು ಹೇಳಿ ಅವರನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ನ ಮಂಡಳಿಯಿಂದ ಈ ಕರೆ ಬಂದಿದ್ದು ಆದರೆ ಆರಂಭಿಕ ತನಿಖೆಯಿಂದ ಮೊಬೈಲ್ ನಿಂದ ಕರೆ ಮಾಡಿದ್ದು ಎಂದು ತಿಳಿದುಬಂದಿದೆ ಎಂದು ವಿವರಿಸಲಾಗಿದೆ.

ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಎಲ್ಲಾ ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಕರೆ ಮಾಡಿ ತಮ್ಮ ಅಥವಾ ತಮ್ಮ ಕಚೇರಿಯ ಹೆಸರಿನಲ್ಲಿ ಇಂತಹ ಕರೆಗಳು ಬಂದರೆ ಸ್ವೀಕರಿಸಬೇಡಿ ಎಂದಿದ್ದಾರೆ.

ಹೊರಗಿನಿಂದ ಸುಪ್ರೀಂ ಕೋರ್ಟ್ ನ ಆಂತರಿಕ ದೂರವಾಣಿ ಸಂಪರ್ಕ ಕರೆಗಳನ್ನು ಬಳಸಿ ಹೀಗೆ ಕರೆ ಮಾಡಲು ಹೇಗೆ ಸಾಧ್ಯ ಎಂದು ಗೊಗೊಯ್ ದೂರಸಂಪರ್ಕ ಪ್ರಾಧಿಕಾರವನ್ನು ಕೂಡ ಕೇಳಿದ್ದಾರೆ.

ಈ ಬಗ್ಗೆ ತನಿಖೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com