
ಸಾಂದರ್ಭಿಕ ಚಿತ್ರ
Source : The New Indian Express
ಭೋಪಾಲ್: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇತ್ತೀಚೆಗೆ ಸಿಆರ್ ಪಿಎಫ್ ಜವಾನರ ಹತ್ಯೆಯನ್ನು ಖಂಡಿಸಿ ಮಧ್ಯ ಪ್ರದೇಶದ ಪಶ್ಚಿಮ ಭಾಗದ ಜಬುವಾ ಜಿಲ್ಲೆಯ ಟೊಮೆಟೊ ಬೆಳೆಯುವ ರೈತರು ಪಾಕಿಸ್ತಾನಕ್ಕೆ ಇನ್ನು ಮುಂದೆ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ.ಜಬುವಾ ಜಿಲ್ಲೆಯ ಪೆಟ್ಲವಾಡ್ ಗ್ರಾಮದಲ್ಲಿ ಸುಮಾರು 5 ಸಾವಿರ ರೈತರು ಟೊಮೆಟೊ ಬೆಳೆಯುತ್ತಿದ್ದು, ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಇನ್ನು ಮುಂದೆ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ.
ಕಳೆದ ಒಂದೂವರೆ ದಶಕದಿಂದ ನಾವು ಟೊಮೆಟೊ ಬೆಳೆಯುತ್ತಿದ್ದು ದೆಹಲಿಯ ಏಜೆಂಟರ್ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದೆವು. ಚೆನ್ನಾಗಿ ಲಾಭ ಬರುತ್ತಿತ್ತು. ಆದರೆ ನಮ್ಮ ಸೈನಿಕರ ಮೇಲೆ ಪಾಕಿಸ್ತಾನಿಯರು ಪದೇ ಪದೇ ದಾಳಿ ನಡೆಸುತ್ತಿರುವುದನ್ನು ಖಂಡಿಸಿ ಇನ್ನು ಮುಂದೆ ರಫ್ತು ಮಾಡದಿರಲು ನಿರ್ಧರಿಸಿದ್ದೇವೆ ಎಂದು ಟೊಮೆಟೊ ಬೆಳೆಗಾರ ಬಸಂತಿ ಲಾಲ್ ಪಾಟಿದಾರ್ ಹೇಳಿದರು.
ನಾವು ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡಿ ಉತ್ತಮ ಹಣ ಸಂಪಾದಿಸುತ್ತೇವೆ. ಆದರೆ ಆ ಹಣ ನಮಗೆ ವಿಷದ ರೀತಿ ಕಾಡುತ್ತಿದೆ. ನಮ್ಮ ದೇಶದ ಟೊಮೆಟೊ ತಿಂದು ಹಿಂದಿನಿಂದ ಪಿತೂರಿ ನಡೆಸಿ ನಮ್ಮ ಜವಾನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ. ನಮಗೆ ಹಣಕ್ಕಿಂತ ಸೈನಿಕರ ಪ್ರಾಣ ಮುಖ್ಯ ಎಂದು ಮತ್ತೊಬ್ಬ ಟೊಮೆಟೊ ಬೆಳೆಗಾರ ಮಹೇಂದ್ರ ಆಮದ್ ಹೇಳುತ್ತಾರೆ.
ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರು ರೈತರ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಟೊಮೆಟೊ ಬೆಳೆಗಾರರ ದೇಶಪ್ರೇಮ ಸ್ಪೂರ್ತಿಯನ್ನು ಶ್ಲಾಘಿಸಲೇಬೇಕು. ತಮ್ಮ ವೈಯಕ್ತಿಕ ಲಾಭಕ್ಕಿಂತ ಅವರಿಗೆ ದೇಶದ ಹಿತಾಸಕ್ತಿಯೇ ಮುಖ್ಯವಾಗಿರುವುದು ಖುಷಿಯ ಸಂಗತಿ. ದೇಶದ ಪ್ರತಿ ನಾಗರಿಕರು ಇಂತವರಿಂದ ಸ್ಪೂರ್ತಿ ಪಡೆದುಕೊಳ್ಳಬೇಕು ಎನ್ನುತ್ತಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now