ಪುಲ್ವಾಮಾ ಭಯೋತ್ಪಾದಕ ದಾಳಿ; ವಿಶ್ವಸಂಸ್ಥೆ ಮಧ್ಯ ಪ್ರವೇಶಕ್ಕೆ ಪಾಕಿಸ್ತಾನ ಆಗ್ರಹ

ಭಾರತದೊಂದಿಗಿನ ಉದ್ವಿಗ್ನತೆಯನ್ನು ತಗ್ಗಿಸಲು ವಿಶ್ವಸಂಸ್ಥೆ ತುರ್ತು ಮಧ್ಯೆ ಪ್ರವೇಶಿಸಬೇಕು...
ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ
ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ

ಇಸ್ಲಾಮಾಬಾದ್: ಭಾರತದೊಂದಿಗಿನ ಉದ್ವಿಗ್ನ ಪರಿಸ್ಥಿತಿಯನ್ನು ತಗ್ಗಿಸಲು ವಿಶ್ವಸಂಸ್ಥೆ ತುರ್ತು ಮಧ್ಯೆ ಪ್ರವೇಶಿಸಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ನಂತರ ನಡೆದ ಬೆಳವಣಿಗೆಯಿಂದ ಪಾಕಿಸ್ತಾನ ವಿಶ್ವಸಂಸ್ಥೆಗೆ ಈ ಮನವಿ ಮಾಡಿದೆ.

ಈ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಹದಗೆಟ್ಟಿದ್ದು ಎರಡೂ ದೇಶಗಳು ತಮ್ಮ ರಾಯಭಾರಿಗಳನ್ನು ವಾಹಸ್ ಕರೆಸಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಂತರ ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ವಿಶ್ವಸಂಸ್ಥೆ ಸಾಮಾನ್ಯ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಅವರಿಗೆ ಪತ್ರ ಬರೆದಿದ್ದು, ಎರಡು ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ತಗ್ಗಿಸಬೇಕೆಂದು ಕೋರಿದ್ದಾರೆ. ಇದು ಬಹಳ ತುರ್ತು ವಿಷಯವಾಗಿದ್ದು ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಭದ್ರತಾ ವಿಷಯ ತೀರಾ ಹದಗೆಟ್ಟಿದೆ. ಪಾಕಿಸ್ತಾನದ ಮೇಲೆ ಭಾರತ ಬೆದರಿಕೆಯೊಡ್ಡುತ್ತಿದೆ ಎಂದು ಖುರೇಷಿ ಪತ್ರದಲ್ಲಿ ವಿವರಿಸಿದ್ದಾರೆ.

ಕಾಶ್ಮೀರ ವಿವಾದದಲ್ಲಿ ಮೂರನೇ ವ್ಯಕ್ತಿಯ ಮಧ್ಯ ಪ್ರವೇಶವನ್ನು ಭಾರತ ತಿರಸ್ಕರಿಸಿದ್ದು ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ವಿವಾದಗಳನ್ನು ದ್ವಿಪಕ್ಷೀಯವಾಗಿ ಬಗೆಹರಿಸಬೇಕೆಂದು ಹೇಳಿದೆ.

ಸಿಆರ್ ಪಿಎಫ್ ಯೋಧರ ಮೇಲೆ ಪುಲ್ವಾಮಾದಲ್ಲಿ ನಡೆದ ದಾಳಿ ಕಾಶ್ಮೀರದ ನಿವಾಸಿಯಿಂದ ಆಗಿರುವುದು. ಅದನ್ನು ಭಾರತವೇ ಸಾರಿದೆ. ಈ ಬಗ್ಗೆ ತನಿಖೆ ಪೂರ್ಣವಾಗುವ ಮೊದಲೇ ಪಾಕಿಸ್ತಾನದ ಮೇಲೆ ಭಾರತ ಆರೋಪ ಹೊರಿಸುತ್ತಿದೆ. ದೇಶೀಯ ರಾಜಕೀಯ ಕಾರಣಗಳಿಗೆ ಭಾರತ ಉದ್ದೇಶಪೂರ್ವಕವಾಗಿ ಪಾಕಿಸ್ತಾನ ವಿರುದ್ಧ ತನ್ನ ಪ್ರತಿಭಟನೆಯ ವಾಕ್ಚಾತುರ್ಯವನ್ನು ಪ್ರದರ್ಶಿಸಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.

ಸಿಂಧೂ ನದಿ ಒಪ್ಪಂದವನ್ನು ಕೂಡ ತ್ಯಜಿಸುವುದಾಗಿ ಭಾರತ ಸೂಚನೆ ನೀಡಿದ್ದು ಅದು ಖಂಡಿತಾ ದೊಡ್ಡ ತಪ್ಪಾಗುತ್ತದೆ. ಭಾರತ ಮತ್ತು ಪಾಕ್ ನಡುವಣ ಉದ್ವಿಗ್ನತೆಯನ್ನು ತಗ್ಗಿಸಲು ವಿಶ್ವಸಂಸ್ಥೆಯು ಖಂಡಿತವಾಗಿಯೂ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಖುರೇಷಿ ಹೇಳಿದರು.

ಭಯೋತ್ಪಾದಕ ದಾಳಿಯಲ್ಲಿ ಮುಕ್ತ ಮತ್ತು ನಿಖರವಾದ ತನಿಖೆ ನಡೆಸಲು ಭಾರತಕ್ಕೆ ಸೂಚನೆ ನೀಡಬೇಕೆಂದು ಖುರೇಷಿ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com