ವಿವಿಐಪಿ ಕ್ಯಾಪ್ಟರ್ ಹಗರಣ: ಕುಟುಂಬಕ್ಕೆ ಫೋನ್ ಮಾಡಲು ಅನುಮತಿ ಕೋರಿದ ಕ್ರಿಶ್ಚಿಯನ್ ಮೈಕೆಲ್

ಬಹುಕೋಟಿ ವಿವಿಐಪಿ ಕ್ಯಾಪ್ಟರ್ ಹಗರಣದ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್....
ಕ್ರಿಶ್ಚಿಯನ್ ಮೈಕೆಲ್
ಕ್ರಿಶ್ಚಿಯನ್ ಮೈಕೆಲ್
ನವದೆಹಲಿ: ಬಹುಕೋಟಿ ವಿವಿಐಪಿ ಕ್ಯಾಪ್ಟರ್ ಹಗರಣದ ಬಂಧನಕ್ಕೊಳಗಾಗಿರುವ ಪ್ರಮುಖ ಆರೋಪಿ, ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ವಿದೇಶದಲ್ಲಿರುವ ತನ್ನ ಕುಟುಂಬಕ್ಕೆ ಹಾಗೂ ತನ್ನ ವಕೀಲರಿಗೆ ಫೋನ್ ಮಾಡಲು ಅನುಮತಿ ನೀಡಬೇಕು ಎಂದು ದೆಹಲಿ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಸದ್ಯ ತಿಹಾರ್ ಜೈಲಿನಲ್ಲಿರುವ ಮೈಕೆಲ್ ತನ್ನ ವಕೀಲರ ಮೂಲಕ ಸಿಬಿಐ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಕುಟುಂಬಕ್ಕೆ ಫೋನ್ ಮಾಡಲು ಜೈಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ 22ರಂದು ಮೈಕೆಲ್ ದುಬೈ ನಿಂದ ಗಡಿಪಾರಾಗಿ ಭಾರತಕ್ಕೆ ಬಂದಿದ್ದು, ಸಿಬಿಐ ಹಾಗೂ ಇಡಿ ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
12 ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್​ಪಿ ತ್ಯಾಗಿ ಹಾಗೂ ಕ್ರಿಶ್ಚಿಯನ್ ಮೈಕೆಲ್ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್​ ಶೀಟ್ ಸಲ್ಲಿಸಿದ್ದು, ಈ ಒಪ್ಪಂದದಿಂದ ಸರ್ಕಾರದ ಖಜಾನೆಗೆ 2,666 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದೆ.
ಈ ಒಪ್ಪಂದವು ಸಾಕಾರಗೊಳ್ಳಲು ನೆರವಾಗುವ ಕಾರ್ಯಕ್ಕೆ ಅಗಸ್ಟವೆಸ್ಟ್​ಲ್ಯಾಂಡ್ ಸಂಸ್ಥೆಯಿಂದ ಕ್ರಿಶ್ಚಿಯನ್ ಮೈಕೆಲ್​ ಸುಮಾರು 225 ಕೋಟಿ ರು. ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com