ಅಯ್ಯಪ್ಪ ಸ್ವಾಮಿ ಭಕ್ತರ ಆಕ್ರೋಶದ ಭೀತಿ, ಇನ್ನೂ ಮನೆ ಸೇರದ ಶಬರಿಮಲೆ ಪ್ರವೇಶಿಸಿದ್ದ ಮಹಿಳೆಯರು!

ಶಬರಿಮಲೆ ಪ್ರವೇಶ ಮಾಡಿ ಶತಮಾನದ ಸಂಪ್ರದಾಯಕ್ಕೆ ಕೊನೆ ಹಾಡಿದ್ದ ಕೇರಳದ ಇಬ್ಬರು ಮಹಿಳೆಯರೂ ಇನ್ನೂ ಮನೆಗೆ ವಾಪಸ್ ಆಗಿಲ್ಲ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಚ್ಚಿ: ಶಬರಿಮಲೆ ಪ್ರವೇಶ ಮಾಡಿ ಶತಮಾನದ ಸಂಪ್ರದಾಯಕ್ಕೆ ಕೊನೆ ಹಾಡಿದ್ದ ಕೇರಳದ ಇಬ್ಬರು ಮಹಿಳೆಯರೂ ಇನ್ನೂ ಮನೆಗೆ ವಾಪಸ್ ಆಗಿಲ್ಲ ಎಂದು ತಿಳಿದುಬಂದಿದೆ.
ಹೌದು.. ಈ ಹಿಂದೆ ಮುಂಜಾನೆಯೇ ಮಫ್ತಿ ಪೊಲೀಸರ ಭದ್ರತೆಯಲ್ಲಿ ಅಚ್ಚರಿ ರೀತಿಯಲ್ಲಿ ಶಬರಿಮಲೆ ಪ್ರವೇಶ ಮಾಡಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಕೇರಳದ ಇಬ್ಬರು ಮಹಿಳೆಯರು ಮನೆಗೆ ಹಿಂದಿರುಗಲು ಇನ್ನೂ ಸಾಧ್ಯವಾಗಿಲ್ಲ.
ಸುಪ್ರೀಂಕೋರ್ಟ್‌ ತೀರ್ಪು ಹೊರಬಿದ್ದ ಮೇಲೆ ಬಿಂದು ಅಮ್ಮಿನಿ ಮತ್ತು ಕನಕದುರ್ಗಾ ಅನ್ನೋ ಮಹಿಳೆಯರು ಸನ್ನಿಧಾನಂಗೆ ಪ್ರವೇಶ ಮಾಡಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಮಹಿಳೆಯರು ದರ್ಶನಕ್ಕೆ ತೆರಳುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಅಲ್ಲದೆ ಮಾಧ್ಯಮಗಳಲ್ಲೂ ಭಾರಿ ಚರ್ಚೆ ಹುಟ್ಟುಹಾಕಿತ್ತು. ಈ ಬೆಳವಣೆಗೆ ಬೆನ್ನಲ್ಲೇ ಇದು ಅಯ್ಯಪ್ಪ ಭಕ್ತರ ವಿರೋಧಕ್ಕೆ ಕಾರಣವಾಗಿತ್ತು. 
ಇನ್ನೊಂದೆಡೆ ಮಹಿಳೆಯರು ಅಯ್ಯಪ್ಪನ ಸನ್ನಿಧಿಗೆ ಪ್ರವೇಶ ಮಾಡಿದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಬಿಂದು ಮತ್ತು ಕನಕದುರ್ಗಾ ಇದುವರೆಗೂ ಮನೆಗೆ ಹಿಂದಿರುಗಲು ಸಾಧ್ಯವಾಗಿಲ್ಲ. ಅಯ್ಯಪ್ಪನ ಭಕ್ತರಿಂದ ಇವರಿಗೆ ಜೀವ ಬೆದರಿಕೆ ಇದೆ ಅಂತಾ ಇನ್ನೂ ಅಜ್ಞಾತ ಸ್ಥಳದಲ್ಲೇ ಇದ್ದಾರೆ. 
ಈ ಬಗ್ಗೆ ದೇಗುಲ ಪ್ರವೇಶಿಸಿದ್ದ ಬಿಂದು ಪ್ರತಿಕ್ರಿಯಿಸಿದ್ದು, ದೇಗುಲ ಪ್ರವೇಶ ಮಾಡಿದ್ದರಿಂದ ನಮಗೆ ಯಾವುದೇ ಭಯವಿಲ್ಲ. ನಮ್ಮ ಗುರಿಯನ್ನು ನಾವು ಮುಟ್ಟಿದ್ದೇವೆ. ಅಂದುಕೊಂಡ ಹಾಗೆ ದೇಗುಲವನ್ನು ಪ್ರವೇಶಿಸಿದ್ದೇವೆ. ನನಗೆ ನಮ್ಮ ಪೊಲೀಸ್ ಇಲಾಖೆ, ಕೇರಳ ಸರ್ಕಾರ, ಪ್ರಜಾಪ್ರಭುತ್ವ ಸಮಾಜದ ಮೇಲೆ ನಂಬಿಕೆ ಇದೆ ಎಂದಿದ್ದಾರೆ. ನಮ್ಮನ್ನ ಪೊಲೀಸರು, ನಮ್ಮ ಕೆಲ ಸ್ನೇಹಿತರು ನಾವು ದೇಗುಲ ಪ್ರವೇಶಿಸಬಾರದು ಅಂತಾ ಹೇಳಿದ್ದರು. ಕಾರಣ ನಾವು ಅನೇಕ ಸಮಸ್ಯೆಗಳು, ಜೀವಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಲಹೆ ನೀಡಿದ್ದರು. ಈಗ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com