2019 ಲೋಕಸಭೆ ಚುನಾವಣೆ: ಕನಿಷ್ಠ 57 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ನಿರಾಕರಣೆ?

ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಕ್ನೊ: ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಹರಸಾಹಸಪಡುತ್ತಿದೆ.

ಕಳೆದ 5 ವರ್ಷಗಳಲ್ಲಿ ರಾಜ್ಯದ ಬಹುತೇಕ ಬಿಜೆಪಿ ಸಂಸದರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಲ್ಲಿ ಸೋತಿದ್ದು ಅವರಲ್ಲಿ ಕನಿಷ್ಠ 57 ಮಂದಿ ಸಂಸದರಿಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗುವುದು ಸಂಶಯವಿದೆ.

ಕಳೆದ ಬುಧವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದನ್ನು ಅವರು ರಾಜ್ಯದ ಬಿಜೆಪಿ ನಾಯಕರಿಗೆ ಮನದಟ್ಟು ಮಾಡಿದ್ದರು.ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ ಬಗ್ಗೆ ತಿಳಿಯಲು ಸಭೆಯನ್ನು ಕರೆಯಲಾಗಿತ್ತು.

ಪಕ್ಷದ ಸಂಸದರ ಕುರಿತು ಆಂತರಿಕ ಸಮೀಕ್ಷೆಯನ್ನು ಅಮೆರಿಕಾ ಮೂಲದ ಖಾಸಗಿ ಸಂಸ್ಥೆ ನಡೆಸಿದ್ದು ಉತ್ತರ ಪ್ರದೇಶದ 8,135 ನಯಾ ಪಂಚಾಯತ್ ಗಳ 822 ಬ್ಲಾಕ್ ಗಳಲ್ಲಿ ನಡೆಸಲಾಗಿತ್ತು.ಸಮೀಕ್ಷೆಯಲ್ಲಿ ಬಹುತೇಕ ಬಿಜೆಪಿ ಸಂಸದರು ಜನರಿಗೆ ಕೆಲಸ ಮಾಡಿಕೊಡುವಲ್ಲಿ ವಿಫಲವಾಗಿದ್ದು ಇದರಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ಸಿಗುವುದು ಸಂಶಯವಾಗಿದೆ ಎಂದು ಹಿರಿಯ ನಾಯಕರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ರಾಜ್ಯದ 80 ಲೋಕಸಭೆ ಕ್ಷೇತ್ರಗಳಲ್ಲಿ ಕಳೆದ ಬಾರಿ 71 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಗೋರಖ್ ಪುರ ಮತ್ತು ಪುಲ್ಪುರ್ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆಯಲ್ಲಿ ಸೋಲನುಭವಿಸಿತ್ತು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಗೋರಖ್ ಪುರ ಮತ್ತು ಪುಲ್ಪುರ್ ಕ್ಷೇತ್ರಗಳನ್ನು 2014ರಲ್ಲಿ ಪ್ರತಿನಿಧಿಸಿದ್ದರು. ಆದರೆ ನಂತರ ವಿಧಾನಸಭೆಗೆ ಮರಳಿದ್ದರಿಂದ ತಮ್ಮ ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದರು.
ರಾಜ್ಯದ 97 ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿನ ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.
ಅನೇಕ ಸಂಸದರು ಸ್ಥಳೀಯರ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಕೆಲ ಬಿಜೆಪಿ ಸಂಸದರಿಗೆ ತಮ್ಮ ಭವಿಷ್ಯ ಈಗಾಗಲೇ ತಿಳಿದಿದ್ದು ಸಮಾಜವಾದಿ ಮತ್ತು ಬಿಎಸ್ ಪಿ ಪಕ್ಷಗಳ ಬಾಗಿಲು ತಟ್ಟುತ್ತಿದ್ದಾರೆ ಎಂದು ಸಹ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com