ಗೋವಾ ಆಡಿಯೋ ಟೇಪ್ ಅಧಿಕೃತ, ಪರಿಕ್ಕರ್ ಬಳಿ ರಾಫೆಲ್ ರಹಸ್ಯಗಳ 'ಸ್ಫೋಟಕ' ಮಾಹಿತಿ ಇದೆ: ರಾಹುಲ್

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬಳಿಯೇ ರಾಫೆಲ್ ರಹಸ್ಯಗಳ ಸ್ಪೋಟಕ ಮಾಹಿತಿ ಇದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ರಾಫೆಲ್ ಯುದ್ಧ ವಿಮಾನ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸುತ್ತಾ  ಬಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗೋವಾ ಆಡಿಯೋ ಟೇಪ್  ಅಧಿಕೃತವಾದದ್ದು, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್  ಬಳಿಯೇ ರಾಫೆಲ್ ರಹಸ್ಯಗಳ ಸ್ಪೋಟಕ ಮಾಹಿತಿ ಇದೆ ಎಂದು ಹೇಳಿದ್ದಾರೆ.

ರಫೇಲ್ ವ್ಯವಹಾರ ರಹಸ್ಯ ಕಡತ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಮನೆಯ ಬೆಡ್ ರೊಮ್ ನಲ್ಲಿವೆ ಎಂಬ ಗೋವಾ ಸಚಿವ ವಿಶ್ವಜಿತ್ ರಾಣೆ ಧ್ವನಿಯುಳ್ಳ ಆಡಿಯೋ ಟೇಪ್ ಬಿಡುಗಡೆಯಾದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜನವರಿ ಮೊದಲ ವಾರದಲ್ಲಿ ಬಿಡುಗೆಯಾಗಿದ್ದ ರಾಣೆ ಆಡಿಯೋ ಟೇಪ್  ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ,  ಆಡಿಯೋ ಟೇಪ್ ಬಿಡುಗಡೆಯಾಗಿ 30 ದಿನ ಕಳೆದಿದ್ದರೂ ಯಾವುದೇ ಎಫ್ ಐಆರ್ ದಾಖಲಿಸಿಲ್ಲ, ಅಥವಾ ವಿಚಾರಣೆಗೆ ಆದೇಶಿಸಿಲ್ಲ. ಸಚಿವರಾಗಲೀ ಅಥವಾ ಬೇರೆ ಯಾವುದೇ ಮುಖಂಡರ ವಿರುದ್ಧವಾಗಲೀ ಕ್ರಮ ಕೈಗೊಂಡಿಲ್ಲ ಎಂದು  ಆರೋಪಿಸಿದ್ದಾರೆ.

ಆಡಿಯೋ ಟೇಪ್  ಅಧಿಕೃತವಾದದ್ದು,  ಗೋವಾ ಮುಖ್ಯಮಂತ್ರಿ ಪರಿಕ್ಕರ್ ಬಳಿಯೇ  ರಹಸ್ಯಗಳ  ಸ್ಪೋಟಕ ಮಾಹಿತಿ ಇದೆ. ಪ್ರಧಾನಿ ಮೋದಿ ಅವರೇ ಈ ಅಧಿಕಾರ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಫೇಲ್ ವ್ಯವಹಾರ ರಹಸ್ಯ ಕಡತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬೆಡ್ ರೂಮ್ ನಲ್ಲಿವೆ ಎಂದು ವಿಶ್ವಜಿತ್ ರಾಣೆ ಧ್ವನಿಯುಳ್ಳ ಆಡಿಯೋ ಬಿಡುಗಡೆಯ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ ಸಮರ ಮುಂದುವರೆದಿದೆ.

ಗೋವಾ ಸಂಪುಟ ಸಭೆ ಸಂದರ್ಭದಲ್ಲಿ ರಾಫೆಲ್  ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳು ತಮ್ಮ  ಬೆಡ್ ರೂಮಿನಲ್ಲಿವೆ ಎಂದು ಮನೋಹರ್ ಪರಿಕ್ಕರ್ ಹೇಳಿಕೆ ನೀಡಿರುವುದಾಗಿ ರಾಣೆ ಹೇಳಿರುವುದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ನಲ್ಲಿ ಕಂಡುಬಂದಿದೆ.

ಸಂಸತ್ತಿನ ಚಳಿಗಾಲ ಅಧಿವೇಶನ ಸಂದರ್ಭದಲ್ಲೂ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ್ದ ಆಡಿಯೋ ಟೇಪ್  ಕೇಳಿಸಲು ಪ್ರಯತ್ನಿದ್ದರೂ  ಇದು ಸುಳ್ಳಿನಿಂದ ಕೂಡಿದ್ದು, ಅಧಿಕೃತವಲ್ಲ ಎಂದು ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದರು.

ರಾಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ  ಸರ್ಕಾರ, ಈ ಒಪ್ಪಂದದಲ್ಲಿ ಯಾವುದೇ  ಹಗರಣ ನಡೆದಿಲ್ಲ. ಯಾವುದೇ ಮಧ್ಯವರ್ತಿ ಇಲ್ಲದೆ, ಅಥವಾ ಭ್ರಷ್ಟಾಚಾರ ನಡೆಸದೆ ವ್ಯವಹಾರ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com