ಮಮತಾ ವಿರುದ್ಧ ಮೀಮ್: ಪ್ರಿಯಾಂಕಾ ಶರ್ಮ ಬಿಡುಗಡೆ ವಿಳಂಬ ಪ್ರಶ್ನಿಸಿ ಬಂಗಾಳ ಸರ್ಕಾರಕ್ಕೆ ಕೋರ್ಟ್ ನೊಟೀಸ್

ಸುಪ್ರೀಂ ಕೋರ್ಟ್ ಸೋಮವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರದಲ್ಲಿ ...
ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕ ಶರ್ಮ
ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕ ಶರ್ಮ
ನವದೆಹಲಿ: ಸುಪ್ರೀಂ ಕೋರ್ಟ್ ಸೋಮವಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನ್ಯಾಯಾಂಗ ನಿಂದನೆ ಅರ್ಜಿ ವಿಚಾರದಲ್ಲಿ ಶೋಕಾಸ್ ನೊಟೀಸ್ ಜಾರಿ ಮಾಡಿದೆ. 
ಸೋಷಿಯಲ್ ಮೀಡಿಯಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕುರಿತು ಅವಹೇಳನಕಾರಿಯಾಗಿ ಮೀಮ್ ಪೋಸ್ಟ್ ಮಾಡಿದ್ದರು ಎಂದು ಆರೋಪಿಸಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಕಾರ್ಯಕರ್ತೆ ಪ್ರಿಯಾಂಕಾ ಶರ್ಮ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ವಿಳಂಬ ಮಾಡಲಾಗಿತ್ತು ಎಂದು ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಅರ್ಜಿಯಲ್ಲಿ, ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದರೂ ಕೂಡ ಪ್ರಿಯಾಂಕಾ ಶರ್ಮ ಅವರನ್ನು ಬಿಡುಗಡೆ ಮಾಡುವಲ್ಲಿ ಸರ್ಕಾರ ಒಂದು ದಿನಕ್ಕೂ ಹೆಚ್ಚು ಸಮಯ ವಿಳಂಬ ಮಾಡಿತ್ತು ಎಂದು ಆರೋಪಿಸಿ ಪ್ರಿಯಾಂಕಾ ಶರ್ಮ ಅವರ ಸೋದರ ರಾಜಿಬ್ ಶರ್ಮ ಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಸಂಬಂಧಪಟ್ಟ ಇತರರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಬಿಜೆಪಿ ಯುವ ಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮ ಅವರನ್ನು ಪಶ್ಚಿಮ ಬಂಗಾಳ ಸರ್ಕಾರದ ಪೊಲೀಸರು ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕಳೆದ ಮೇ 10ರಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 500(ಮಾನನಷ್ಟ)ರಡಿ ಬಂಧಿಸಿದ್ದರು.
ಮೇ 14ರಂದು ಸುಪ್ರೀಂ ಕೋರ್ಟ್ ನ ರಜಾ ಪೀಠ ಪ್ರಿಯಾಂಕ ಶರ್ಮಗೆ ಜಾಮೀನು ನೀಡಿತ್ತು. ಆದರೆ ಕೋರ್ಟ್ ಆದೇಶವಿದ್ದರೂ ಕೂಡ ತಮ್ಮ ಸೋದರಿಯನ್ನು ಬಂಧನದಿಂದ ಬಿಡುಗಡೆ ಮಾಡುವಲ್ಲಿ ಸರ್ಕಾರ 24 ಗಂಟೆಗೂ ಹೆಚ್ಚು ಕಾಲ ವಿಳಂಬ ಮಾಡಿತ್ತು ಎಂದು ಪ್ರಿಯಾಂಕ ಶರ್ಮ ಸೋದರ ರಜಿಬ್ ಶರ್ಮ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com