ಕಣಿವೆ ರಾಜ್ಯಕ್ಕೆ ಕಾಶ್ಮೀರಿ ಪಂಡಿತರನ್ನು ಮರಳಿ ಕರೆತರಲು ಮೋದಿ ಸರ್ಕಾರ ಬದ್ಧ: ಗೃಹ ಸಚಿವ ಅಮಿತ್ ಶಾ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಕಾಶ್ಮೀರಿ ಪಂಡಿತರನ್ನು ಕರೆತರಲು ಕೇಂದ್ರದ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತ್ ಶಾ
ರಾಜ್ಯಸಭೆಯಲ್ಲಿ ಅಮಿತ್ ಶಾ
ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಕಾಶ್ಮೀರಿ ಪಂಡಿತರನ್ನು ಕರೆತರಲು ಕೇಂದ್ರದ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಜಮ್ಮು-ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ -2019 ಮಂಡಿಸಿದ ಬಳಿಕ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು. ಜಮ್ಮು ಕಾಶ್ಮೀರದಲ್ಲಿ ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಕಣಿವೆಯಲ್ಲಿ ಶಾಂತಿ ಸ್ಥಾಪನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಅಂತೆಯೇ ಕಣಿವೆಗೆ ಕಾಶ್ಮೀರಿ ಪಂಡಿತರನ್ನು ವಾಪಸ್ ಕರೆತರಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. 
ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕಣಿವೆ ರಾಜ್ಯದಲ್ಲಿ ಉಗ್ರವಾದಕ್ಕೆ ಬಂಡವಾಳ ಪೂರೈಕೆಯಾಗುತ್ತಿದುದು ಸಂಪೂರ್ಣ ಬಂದ್‌ ಆಗಿದೆ ಎಂದು ಸಚಿವ ಅಮಿತ್‌ ಶಾ ತಿಳಿಸಿದರು. ಇನ್ನು ಜಮ್ಮು-ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ ಮಂಡನೆ ವೇಳೆ ಜಮ್ಮು-ಕಾಶ್ಮೀರದ ಇತಿಹಾಸ ಕೆದಕಿದ ಅಮಿತ್​​ ಶಾ, ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆ ತೆಗೆದುಕೊಂಡರು. 
'ಈ ಮೀಸಲಾತಿ ಯಾರನ್ನೂ ಕೂಡ ಮೆಚ್ಚಿಸಲು ಅಲ್ಲ. ಬದಲಿಗೆ ನಿರಂತರ ಉಗ್ರರ ದಾಳಿ ಹಾಗೂ ಬಾಂಬ್ ಸ್ಪೋಟಕ್ಕೆ ತತ್ತರಿಸಿ ಹೋಗುತ್ತಿರುವ ಜನ ಮತ್ತು ವಿದ್ಯಾರ್ಥಿಗಳಿಗೆ ಆಶ್ರಯ ನೀಡಲು ಜಾರಿ ಮಾಡಬೇಕಿದೆ. ಇಂತಹ ಮಸೂದೆಯಿಂದ ಕಥುವಾ, ಸಾಂಬಾ ಮತ್ತು ಜಮ್ಮುವಿನಲ್ಲಿ ವಾಸಿಸುವ 3.5 ಲಕ್ಷ ಜನರಿಗೆ ಸಹಾಯವಾಗಲಿದೆ. ಸದ್ಯ ಕಾನೂನಿನ ಪ್ರಕಾರ ರಾಜ್ಯದಲ್ಲಿ ಶೇಕಡಾ 43 ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈ ಪೈಕಿ ಶೇ. 3ರಷ್ಟು ನಿಯಂತ್ರಣ ರೇಖೆಯ ಉದ್ದಕ್ಕೂ ವಾಸಿಸುವ ಜನರಿಗೆ ಲಭ್ಯವಾಗುತ್ತಿದೆ. ನಾವು ಜಾರಿಗೆ ಮಾಡಲಿರುವ ನೂತನ ಮಸೂದೆ ರಾಜ್ಯದ ಅಂತರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಶೇಕಡಾ 3 ರಷ್ಟು ಮೀಸಲಾತಿ ವಿಸ್ತರಿಸಲು ಅವಕಾಶ ನೀಡುತ್ತದೆ ಎಂದರು.
ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರ
ಇನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಿದ ಜಮ್ಮು-ಕಾಶ್ಮೀರ ಮೀಸಲು (ತಿದ್ದುಪಡಿ) ವಿಧೇಯಕ -2019 ಅನ್ನು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಅಂತೆಯೇ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಇನ್ನೂ ಆರು ತಿಂಗಳ ಕಾಲ ವಿಸ್ತರಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com