ರಾಯ್ ಬರೇಲಿ ರೈಲು ಕೋಚ್ ಫ್ಯಾಕ್ಟರಿ ಖಾಸಗೀಕರಣಕ್ಕೆ ಸೋನಿಯಾ ವಿರೋಧ

ರಾಯ್ ಬರೇಲಿಯ ಆಧುನಿಕ ರೈಲು ಕೋಚ್ ಫ್ಯಾಕ್ಟರಿ ಸೇರಿದಂತೆ ಸಾರ್ವಜನಿಕ ವಲಯದ ರೈಲ್ವೆಯ ಖಾಸಗೀಕರಣಕ್ಕೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ....

Published: 02nd July 2019 12:00 PM  |   Last Updated: 02nd July 2019 03:19 AM   |  A+A-


Sonia Gandhi opposes move to privatise Rae Bareli coach factory

ಸೋನಿಯಾ ಗಾಂಧಿ

Posted By : LSB LSB
Source : UNI
ನವದೆಹಲಿ: ರಾಯ್ ಬರೇಲಿಯ ಆಧುನಿಕ ರೈಲು ಕೋಚ್ ಫ್ಯಾಕ್ಟರಿ ಸೇರಿದಂತೆ ಸಾರ್ವಜನಿಕ ವಲಯದ ರೈಲ್ವೆಯ ಖಾಸಗೀಕರಣಕ್ಕೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ  ಅವರು ಮಂಗಳವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ದೇಶದ ಆರು ರೈಲ್ವೆ ಘಟಕಗಳನ್ನು ಖಾಸಗೀಕರಣಗೊಳಿಸಲು ಸರ್ಕಾರದ ಮಟ್ಟದಲ್ಲಿ ಮಾತುಕತೆಗಳು  ನಡೆದಿವೆ. ಇದರಲ್ಲಿ ತಮ್ಮ ಸ್ವಕ್ಷೇತ್ರ ಉತ್ತರ ಪ್ರದೇಶದ ರಾಯ್ ಬರೇಲಿಯ ಆಧುನಿಕ ರೈಲು ಬೋಗಿ ಕಾರ್ಖಾನೆಯೂ ಸೇರಿದೆ. ಖಾಸಗೀಕರಣದಿಂದಾಗಿ ಸಾವಿರಾರು ಜನ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದರು.

ಸಂಸತ್ತಿನಲ್ಲಿ  ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ ಸತ್ ಸಂಪ್ರದಾಯವನ್ನು ರದ್ದುಪಡಿಸಿರುವ ಸರ್ಕಾರ ಕ್ರಮವನ್ನು ಸೋನಿಯಾ ಗಾಂಧಿ ಟೀಕಿಸಿದರು.

ಸಂಸತ್ತಿನಲ್ಲಿ ಪ್ರತ್ಯೇಕವಾಗಿ ರೈಲ್ವೆ ಬಜೆಟ್ ಮಂಡಿಸುವುದು ವಿಶಿಷ್ಟವಾಗಿತ್ತು,  ಅಲ್ಲದೆ ಅದೊಂದು  ಹಳೆಯ ಸಂಪ್ರದಾಯವಾಗಿತ್ತು. ಸರ್ಕಾರ ಈ ಪರಂಪರೆಯಿಂದ ಹಿಂದೆ ಸರಿದಿದ್ದು ಯಾಕೆ ? ಎಂದು ಪ್ರಶ್ನಿಸಿದರು. 

ದೇಶದ  ಆಸ್ತಿಗಳನ್ನು ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಹಂಚಿಕೆ ಮಾಡುವ ಭಾಗವಾಗಿ ರೈಲ್ವೆ ಘಟಕಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ  ಎಂದು ಆರೋಪಿಸಿದರು.

ಸರ್ಕಾರದ ಈ ಕ್ರಮದಿಂದ ಸಾವಿರಾರು ಮಂದಿ ನಿರುದ್ಯೋಗಿಗಳಾಗಲಿದ್ದಾರೆ. ರಾಯ್ ಬರೇಲಿ  ರೈಲು ಬೋಗಿ ಕಾರ್ಖಾನೆಯನ್ನು ಈ ಪ್ರಕ್ರಿಯೆಗೆ ಆಯ್ಕೆ ಮಾಡಿಕೊಂಡಿರುವುದಕ್ಕೆ ಸೋನಿಯಾ ಗಾಂಧಿ ತೀವ್ರ ಬೇಸರ ವ್ಯಕ್ತಪಡಿಸಿದರು.

ರಾಯ್ ಬರೇಲಿ ಕೋಚ್ ಕಾರ್ಖಾನೆ ಸೇರಿದಂತೆ ದೇಶಿಯ ಉತ್ಪಾದನೆಗೆ ಪ್ರೋತ್ಸಾಹ ನೀಡಲು  ಹಿಂದಿನ ಯುಪಿಎ ಸರ್ಕಾರ, ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಲವು ಯಶಸ್ವಿ ಯೋಜನೆಗಳನ್ನು ಕೈಗೊಂಡಿದ್ದರು ಎಂದು ಹೇಳಿದರು.

ಭಾರತೀಯ ರೈಲ್ವೆಯಲ್ಲಿ ರಾಯ್ ಬರೇಲಿಯ ಕೋಚ್ ಫ್ಯಾಕ್ಟರಿ ಅತ್ಯಂತ ಆಧುನಿಕ ಘಟಕವಾಗಿದೆ. ಅಲ್ಲದೆ ಮಿತ ಆರ್ಥಿಕ ವೆಚ್ಚದಲ್ಲಿ ರೈಲು ಕೋಚ್ ಗಳನ್ನು ಉತ್ಪಾದಿಸುತ್ತಿದೆ ಎಂದರು.

ಸರ್ಕಾರಿ ಸ್ವಾಮ್ಯದ  ಕೈಗಾರಿಕಾ ಘಟಕಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ವಹಿಸುವ ಸರ್ಕಾರದ ನಿರ್ಧಾರಕ್ಕೆ ಅಚ್ಚರಿ ವ್ಯಕ್ತಪಡಿಸಿದ ಸೋನಿಯಾ ಗಾಂಧಿ, ಸರ್ಕಾರದ ನಿರ್ಧಾರದಿಂದ  ಕಾರ್ಖಾನೆಯ ಸಾವಿರಾರು ಕಾರ್ಮಿಕರ ಭವಿಷ್ಯ ಡೋಲಾಯಮಾನವಾಗಿದ್ದು, ಅವರ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp