ಕೊಲಿಜಿಯಂ ವ್ಯವಸ್ಥೆ ಪ್ರಶ್ನಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ನ್ಯಾಯಮೂರ್ತಿ

ನ್ಯಾಯಾಂಗ ಇಲಾಖೆಯಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ವಿವಾದ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ನ್ಯಾಯಮೂರ್ತಿಗಳ ನೇಮಕಾತಿಯ...
ನರೇಂದ್ರ ಮೋದಿ
ನರೇಂದ್ರ ಮೋದಿ
ಲಖನೌ: ನ್ಯಾಯಾಂಗ ಇಲಾಖೆಯಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ವಿವಾದ ಮತ್ತೊಮ್ಮೆ ಜೀವ ಪಡೆದುಕೊಂಡಿದೆ. ನ್ಯಾಯಮೂರ್ತಿಗಳ ನೇಮಕಾತಿಯ ಕೊಲಿಜಿಯಂ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಕುರಿತು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಂಗ್ ನಾಥ್ ಪಾಂಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೂರು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. 
ಜುಲೈ 1ರಂದು ಬರೆದಿರುವ ಈ ಪತ್ರದಲ್ಲಿ, ಕೊಲಿಜಿಯಂ ವ್ಯವಸ್ಥೆಯ ಮೂಲಕ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಅಪಾರದರ್ಶಕತೆ, ಪಕ್ಷಪಾತ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ ಎಂದಿದ್ದಾರೆ. ಈ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.
ಪತ್ರದಲ್ಲಿ ಮೊದಲಿಗೆ ಲೋಕಸಭಾ ಚುನಾವಣೆಯ ದಾಖಲೆಯ ಗೆಲುವಿಗೆ ಪ್ರಧಾನಿಯನ್ನು ಅಭಿನಂದಿಸಿರುವ ಪಾಂಡೆ, ವಂಶಪಾರಂಪರ್ಯೆಯ ರಾಜಕಾರಣವನ್ನು ಖಂಡಿಸಿದ್ದಾರೆ. ನಂತರ, ತಮ್ಮ 34 ವರ್ಷಗಳ ಅನುಭವವನ್ನು ವಿವರಿಸಿರುವ ಅವರು, ಕೊಲಿಜಿಯಂ ವ್ಯವಸ್ಥೆ ಮೂಲಕ ನ್ಯಾಯಮೂರ್ತಿಗಳ ನೇಮಕಾತಿ ನಡೆದಲ್ಲಿ ಜಾತೀಯತೆ ಹಾಗೂ ಸ್ವಜನಪಕ್ಷಪಾತ ಪ್ರಮುಖ ಪಾತ್ರ ವಹಿಸುತ್ತದೆ. ಇದು ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
ಕೊಲಿಜಿಯಂ ವ್ಯವಸ್ಥೆಯಲ್ಲಿ, ಸದಸ್ಯರು ಮುಚ್ಚಿದ ಬಾಗಿಲ ಹಿಂದೆ ಟೀ ಕುಡಿಯುತ್ತ ತಮ್ಮ ಲಾಬಿ ಹಾಗೂ ಪಕ್ಷಪಾತದ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಇಷ್ಟದ ವ್ಯಕ್ತಿಯ ಹೆಸರು ಸೂಚಿಸುತ್ತಾರೆ ಹಾಗೂ ಅಂತಿಮ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ನೇಮಕಗೊಂಡವರ ಹೆಸರನ್ನು ಬಹಿರಂಗಪಡಿಸಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯನ್ನು ಗೌಪ್ಯವಾಗಿಡುವುದರಿಂದ ಅದು ಪಾರದರ್ಶಕತೆಯ ನಿಯಮಗಳ ಉಲ್ಲಂಘನೆಯಾಗುತ್ತದೆ. ಪರಿಣಾಮವಾಗಿ, ನೇಮಕಗೊಂಡ ನ್ಯಾಯಾಧೀಶರು ನ್ಯಾಯಾಂಗ ಕೆಲಸವನ್ನು ಪೂರ್ವಾಗ್ರಹವಿಲ್ಲದೆ ನಿರ್ವಹಿಸುತ್ತಾರೆಯೇ ಎಂಬುದು ಸವಾಲಾಗಿ ಉಳಿಯುತ್ತದೆ ಎಂದಿದ್ದಾರೆ. 
ಕೆಲ ಹಿರಿಯ ನ್ಯಾಯಮೂರ್ತಿಗಳ ಸಂಬಂಧಿಕರನ್ನು ಹೈಕೋರ್ಟ್ ಗಳಿಗೆ ನೇಮಿಸುವುದು ಕಷ್ಟವಾದಾಗ ಅವರು ಅಧೀನ ನ್ಯಾಯಾಲಯಗಳಿಗೆ ಅವರನ್ನು ನೇಮಿಸುತ್ತಾರೆ. ಇದು ಅರ್ಹ ವಕೀಲರ ಅವಕಾಶಗಳನ್ನು ಕಿತ್ತುಕೊಳ್ಳುತ್ತದೆ ಎಂದು ದೂರಿದ್ದಾರೆ.
ಈ ಹಿಂದೆ ಕೇಂದ್ರ ಸರ್ಕಾರ, ನೇಮಕಾತಿಯಲ್ಲಿ ಪಾರದರ್ಶಕತೆ ತರಲು ರಾಷ್ಟ್ರೀಯ ನ್ಯಾಯಾಂಗ ಸೇವಾ ಆಯೋಗ (ಎನ್ ಜೆಎಸಿ) ಸ್ಥಾಪಿಸಲು ಮುಂದಾಗಿತ್ತಾದರೂ, ದುರದೃಷ್ಟವಶಾತ್ ಅದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಇಂದು ಸುಪ್ರೀಂಕೋರ್ಟ್ ನ ಆಂತರಿಕ ಜಗಳಗಳು, ರೋಸ್ಟರ್ ಕಿತ್ತಾಟಗಳು ಬಹಿರಂಗವಾಗುತ್ತಿವೆ. ಇದರಿಂದ ನ್ಯಾಯಾಂಗದ ಗುಣಮಟ್ಟಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ. 
ತಾವು ಸಾಮಾನ್ಯ ಹಿನ್ನೆಲೆಯಿಂದ ಬಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ನ್ಯಾಯಾಧೀಶನಾಗಿ. ನಂತರ ತಮ್ಮ ಪರಿಶ್ರಮದಿಂದ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದೇನೆ. ಆದ್ದರಿಂದ ಸಾಮಾನ್ಯ ಹಿನ್ನೆಲೆಯ ವ್ಯಕ್ತಿಗಳು ಕೂಡ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿರುವ ಅವಕಾಶ ಕಲ್ಪಿಸುವಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com