ಕರ್ನಾಟಕ ರಾಜಕೀಯ ಬಿಕ್ಕಟ್ಟು : ಲೋಕಸಭೆಯಲ್ಲಿ ಕಾಂಗ್ರೆಸ್ ಸಭಾ ತ್ಯಾಗ, ಮನೆಯನ್ನು ಸರಿಯಾಗಿಟ್ಟುಕೊಳ್ಳಿ- ರಾಜನಾಥ್

ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟು ಲೋಕಸಭೆಯಲ್ಲಿ ಇಂದು ಸಹ ಪ್ರತಿಧ್ವನಿಸಿತು. ಬಿಜೆಪಿ ಕುದುರೆ ವ್ಯಾಪಾರ ರಾಜಕಾರಣಕ್ಕೆ ಮುಂದಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು.

Published: 09th July 2019 12:00 PM  |   Last Updated: 09th July 2019 04:21 AM   |  A+A-


Rajanath Singh

ರಾಜನಾಥ್ ಸಿಂಗ್

Posted By : ABN ABN
Source : ANI
ನವದೆಹಲಿ: ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟು ಲೋಕಸಭೆಯಲ್ಲಿ ಇಂದು ಸಹ ಪ್ರತಿಧ್ವನಿಸಿತು. ಬಿಜೆಪಿ ಕುದುರೆ ವ್ಯಾಪಾರ ರಾಜಕಾರಣಕ್ಕೆ ಮುಂದಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ನಡೆಸಿದರು. ಕಾಂಗ್ರೆಸ್ ಆರೋಪವನ್ನು ನಿರಾಕರಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್,  ನಿಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಹೇಳಿದರು.

ಪ್ರಶ್ನೋತ್ತರ ವೇಳೆ ಬಳಿಕ ಕಾಂಗ್ರೆಸ್ ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿದರು. ಆದರೆ, ಈ ವಿಚಾರವನ್ನು ನಿನ್ನೆಯೇ ಪ್ರಸ್ತಾಪಿಸಲಾಗಿದ್ದು, ಲೋಕಸಭೆಯನ್ನು ಪಾಲಿಕೆಯಂತೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಸ್ಪಷ್ಟವಾಗಿ ಹೇಳಿದರು.

ಕಾಂಗ್ರೆಸ್ ಸದಸ್ಯರು ನೀಡಿದ  ಸದನ ಮುಂದೂಡಿಕೆ ನಿರ್ಣಯ ನೋಟಿಸ್ ನ್ನು ಸ್ಪೀಕರ್ ಸ್ವೀಕರಿಸಲಿಲ್ಲ. ಕರ್ನಾಟಕದಲ್ಲಿನ ಆಡಳಿತಾರೂಢ ಕಾಂಗೆಸ್ ಹಾಗೂ ಜೆಡಿಎಸ್ ಸರ್ಕಾರವನ್ನು ಪತನಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಕುದುರೆ ವ್ಯಾಪಾರಕ್ಕೆ ನಿಂತಿದೆ. ಮುಂದಿನ ಟಾರ್ಗೆಟ್ ಮಧ್ಯಪ್ರದೇಶವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಧಿರ್ ರಂಜನ್ ಚೌದರಿ ಆರೋಪಿಸಿದರು. 

ಮೊದಲಿಗೆ ತಮ್ಮ ಸೀಟಿನ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರು ನಂತರ ಸದನದ ಬಾವಿಗಿಳಿದು , ಸರ್ವಾಧಿಕಾರಿತ್ವ ನಿಲಲ್ಲಿ, ನಮ್ಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿ, ಸಭಾತ್ಯಾಗ ನಡೆಸಿದರು. ಡಿಎಂಕೆ, ನ್ಯಾಷನಲ್ ಕಾನ್ಫರೆನ್ಸ್, ಮತ್ತಿತರ ಪಕ್ಷಗಳು ಈ ಪ್ರತಿಭಟನೆಗೆ ಕೈ  ಜೋಡಿಸಿದವು. 

ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟಿನ ಹಿಂದೆ ಬಿಜೆಪಿಯ ಕೈವಾಡವಿಲ್ಲ. ರಾಹುಲ್ ಗಾಂಧಿ ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್ ತೊಂದರೆ ಅನುಭವಿಸುತ್ತಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

ಹಲವು ಸಮಸ್ಯೆಗಳು ದೇಶದ ಮುಂದಿದ್ದು, ಸುಗಮ ಕಲಾಪಕ್ಕೆ ಕಾಂಗ್ರೆಸ್ ಸದಸ್ಯರು ಅವಕಾಶ ಮಾಡಿಕೊಡಬೇಕೆಂದು ಪ್ರಹ್ಲಾದ್ ಜೋಷಿ ಮನವಿ ಮಾಡಿಕೊಂಡರು. ಕಲಾಪವನ್ನು ವಿಶ್ವವೇ ವೀಕ್ಷಿಸುತ್ತಿದ್ದು, ಪಾಲಿಕೆ ರೀತಿಯಲ್ಲಿ ಲೋಕಸಭೆಯಲ್ಲಿ ವರ್ತಿಸಬಾರದು ಎಂದು ಓಂ ಬಿರ್ಲಾ ಹೇಳಿದರು. ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್ ಆಂತರಿಕ ವಿಚಾರವಾಗಿದ್ದು, ತಮ್ಮ ಮನೆಯನ್ನು ಸರಿಯಾಗಿಟ್ಟುಕೊಳ್ಳುವಂತೆ ರಾಜನಾಥ್ ಸಿಂಗ್ ಹೇಳಿದರು. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp