ನದಿಯಲ್ಲಿ ತೇಲಿಬಂದ ಬಾಲಕನ ಹೆಣ, ಹರಸಾಹಸ ಪಟ್ಟು ತವರು ಪಾಕಿಸ್ತಾನಕ್ಕೆ ಕಳಿಸಿದ ಭಾರತ ಸೇನೆ

ಯುದ್ಧವಷ್ಟೇ ಅಲ್ಲ.. ಮಾನವೀಯತೆಯಲ್ಲೂ ತಾನೇ ಮುಂದು ಎಂಬುದನ್ನು ಸಾಬೀತು ಮಾಡಿರುವ ಭಾರತೀಯ ಸೇನೆ ನದಿಯಲ್ಲಿ ತೇಲಿಬಂದ ಪಾಕಿಸ್ತಾನ ಮೂಲದ ಬಾಲಕನ ಶವವನ್ನು ಪಾಕಿಸ್ತಾನಕ್ಕೆ ಗೌರವ ಪೂರ್ವಕವಾಗಿ ಮರಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಯುದ್ಧವಷ್ಟೇ ಅಲ್ಲ.. ಮಾನವೀಯತೆಯಲ್ಲೂ ತಾನೇ ಮುಂದು ಎಂಬುದನ್ನು ಸಾಬೀತು ಮಾಡಿರುವ ಭಾರತೀಯ ಸೇನೆ ನದಿಯಲ್ಲಿ ತೇಲಿಬಂದ ಪಾಕಿಸ್ತಾನ ಮೂಲದ ಬಾಲಕನ ಶವವನ್ನು ಪಾಕಿಸ್ತಾನಕ್ಕೆ ಗೌರವ ಪೂರ್ವಕವಾಗಿ ಮರಳಿಸಿದೆ.
ಹೌದು.. ಪಾಕಿಸ್ತಾನದಿಂದ ಭಾರತದತ್ತ ಹರಿದುಬರುವ ಕಿಶನ್‌ ಗಂಗಾ ನದಿಯಲ್ಲಿ ತೇಲಿ ಬಂದ ಏಳು ವರ್ಷದ ಬಾಲಕನ ಶವವನ್ನು ನೋಡಿದ ಭಾರತೀಯ ಸೇನೆಯ ಸೈನಿಕರು ಅದನ್ನು ಸುರಕ್ಷಿತವಾಗಿ ನದಿಯಿಂದ ಮೇಲೆತ್ತೆ ಬಳಿಕ ಅತ್ಯಂತ ಗೌರವಪೂರ್ವಕವಾಗಿ ಪಾಕಿಸ್ತಾನಕ್ಕೆ ಮರಳಿಸಿದ್ದಾರೆ. ಅತ್ಯಂತ ರೋಚಕ ವಿಚಾರವೆಂದರೆ ಬಾಲಕನ ಶವ ನದಿಯ ಅತ್ಯಂತ ಅಪಾಯಕಾರಿ ಜಾಗದಲ್ಲಿ ಸಿಲುಕಿತ್ತು. ಭಾರತದ ಸೇನಾಧಿಕಾರಿಗಳ ತಂಡ ನೆಲಬಾಂಬ್ ಗಳಿದ್ದ ಅಪಾಯಕಾರಿ ಪ್ರದೇಶದಿಂದ ಬಾಲಕನ ಶವವನ್ನು ಸುರಕ್ಷಿತವಾಗಿ ಗಡಿ ನಿಯಂತ್ರಣಾ ರೇಖೆಗೆ ತಂದು, ಪಾಕಿಸ್ತಾನದ ವಶಕ್ಕೆ ಒಪ್ಪಿಸಿದ್ದಾರೆ.
ಕಾಶ್ಮೀರದ ಇಂಡೋ-ಪಾಕ್ ಗಡಿಯ ಗುರ್ಜ್‌ ಕಣಿವೆಯ ಅಖೂರ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕನ ಶವ ಹಸ್ತಾಂತರ ವಿಚಾರ ಕಳೆದ ಮೂರು ದಿನಗಳಿಂದ ಗಡಿ ನಿಯಂತ್ರಣ ರೇಖೆಯ ಎರಡೂ ಬದಿಯ ಹಳ್ಳಿಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. 
ಏನಿದು ಘಟನೆ..?
ಅಖೂರ ಗ್ರಾಮಸ್ಥರು ಮಂಗಳವಾರ ಕಿಶನ್‌ಗಂಗಾ ನದಿಯಲ್ಲಿ ಶವವೊಂದು ತೇಲಿ ಬರುವುದನ್ನು ಗುರುತಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಮಗು ನಾಪತ್ತೆಯಾಗಿದೆ ಎನ್ನುವ ಪೋಸ್ಟ್‌ ಪಾಕ್ ಆಕ್ರಮಿತ ಕಾಶ್ಮೀರದ ಮಿಮಿಮಾರ್ಗ್ ಅಸ್ತೂರ್‌ ಗ್ರಾಮದ ಫೇಸ್‌ಬುಕ್ ಪುಟದಲ್ಲಿ ಕಾಣಿಸಿಕೊಂಡಿತ್ತು. ನಂತರ ಮಗು ಕಳೆದುಕೊಂಡ ಕುಟುಂಬ ಕಣ್ಣೀರು ಇಡುವ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು. ಬಾಲಕನ ಶವ ಪತ್ತೆಯಾಗಿರುವ ವಿಷಯ ತಿಳಿದ ತಕ್ಷಣ ಪಾಕ್ ಸೇನೆಗೆ ಈ ವಿಷಯ ತಿಳಿಸುವಂತೆ ಸೇನಾಧಿಕಾರಿಗಳಿಗೆ ಬಂಡಿಪೊರ ಜಿಲ್ಲಾಧಿಕಾರಿ ಶಬಾದ್ ಮಿರ್ಝಾ ಸೂಚಿಸಿದರು. ಅದರಂತೆ ಪಾಕ್ ಸೇನಾಧಿಕಾರಿಗಳಿಗೆ ವಿಷಯವನ್ನೂ ತಿಳಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಬಾಲಕನ ಶವ ಕೊಳೆಯದಂತೆ ರಕ್ಷಿಸಿಡಲು ಅಖೂರ ಸುತ್ತಮುತ್ತ ಎಲ್ಲಿಯೂ ಶವಾಗಾರ ಇರಲಿಲ್ಲ. ಹೀಗಾಗಿ ಸ್ಥಳೀಯರು ಅಲ್ಲಿನ ಬೆಟ್ಟದಿಂದ ಸಂಗ್ರಹಿಸಿದ ಮಂಜುಗಡ್ಡೆಗಳನ್ನು ಬಾಲಕನ ಶವದ ಸುತ್ತಲೂ ಜೋಡಿಸಿಟ್ಟು, ಶವ ಕೊಳೆಯದಂತೆ ಕಾಪಾಡಿಕೊಂಡರು. ಶವ ಕೊಳೆಯಬಹುದು ಎನ್ನುವ ಕಾರಣಕ್ಕೆ ಭಾರತೀಯ ಸೇನೆಯು ಗುರೆಝ್ ಸಮೀಪವೇ ಶವವನ್ನು ಪಾಕ್ ಸೇನೆಗೆ ಹಸ್ತಾಂತರಿಸಲು ಉದ್ದೇಶಿಸಿತ್ತು. ಆದರೆ ಪಾಕಿಸ್ತಾನದ ಅಧಿಕಾರಿಗಳು ಕುಪ್ವಾರಾ ಜಿಲ್ಲೆಯ ತೀತ್ವಾಲ್ ಸಮೀಪ ಇರುವ ಅಧಿಕೃತ ವಿನಿಮಯ ಠಾಣೆಯಲ್ಲಿ ಶವ ಸ್ವೀಕರಿಸಲು ಸಿದ್ಧರಾದರು.  ಆದರೆ ಶವವನ್ನು ಸ್ವೀಕರಿಸಲು ನಿರ್ಧರಿಸದ ಗುರೇಜ್ ಪ್ರದೇಶದ ಸುತ್ತಮುತ್ತ ಎರಡೂ ದೇಶಗಳ ಸೈನಿಕರು ರಕ್ಷಣೆಗಾಗಿ ನೆಲಬಾಂಬ್ ಗಳನ್ನು ಅಳವಡಸಿಟ್ಟಿದ್ದಾರೆ. ಇದು ಪಾಕ್‌ ಸೇನೆಯ ಹಿಂಜರಿಕೆಗೆ ಮುಖ್ಯ ಕಾರಣವಾಗಿತ್ತು. 
ಗುರುವಾರ ಮುಂಜಾನೆಯ ಹೊತ್ತಿಗೆ ಪಾಕಿಸ್ತಾನ ಸೇನೆಯು ಶವವನ್ನು ಗುರೇಝ್ ಸಮೀಪವೇ ಸ್ವೀಕರಿಸಲು ಸಮ್ಮತಿ ಸೂಚಿಸಿತು. ಎರಡೂ ದೇಶದ ಅಧಿಕಾರಿಗಳು ಭೇಟಿಯಾಗುವ ಸ್ಥಳದಲ್ಲಿ ಸಾಕಷ್ಟು ನೆಲಬಾಂಬ್‌ ಗಳಿದ್ದ ಕಾರಣ ಹೆಜ್ಜೆ ಮೇಲೆ ಹೆಜ್ಜೆ ಇರಿಸಿ ಭಾರತ ತಂಡ ಮುನ್ನಡೆದು ಬಾಲಕನ ಶವವನ್ನು ಪಾಕಿಸ್ತಾನದ ಅವರ ಪೋಷಕರಿಗೆ ಒಪ್ಪಿಸಿದ್ದಾರೆ. 
ಮಾನವೀಯತೆಗಾಗಿ ಶಿಷ್ಟಾಚಾರವನ್ನೇ ಬದಿಗೊತ್ತಿದ ಶಿಸ್ತಿನ ಸಿಪಾಯಿಗಳು
ಇನ್ನು ಬಾಲಕನ ಶವವನ್ನು ಆತನ ಪೋಷಕರಿಗೆ ಒಪ್ಪಿಸುವಾಗ ಸೇನೆ ಶಿಷ್ಟಾಚಾರವನ್ನೇ ಬದಿಗೊತ್ತಿದೆ. ಸೇನಾ ಶಿಷ್ಟಾಚಾರದಂತೆ ಶವವನ್ನು ಅಧಿಕೃತ ವಿನಿಮಯ ಠಾಣೆಯಿಂದ ರವಾನಿಸಬೇಕಿತ್ತು. ಆದರೆ ಮಾನವೀಯತೆಯ ದೃಷ್ಟಿಯಿಂದ ಬಾಲಕನ ಶವವನ್ನು ಅದು ದೊರೆತ ಸ್ಥಳದ ಸಮೀಪವೇ ಪಾಕ್ ಸೇನೆಗೆ ಒಪ್ಪಿಸಲಾಯಿತು. 
ಈ ಬಗ್ಗೆ ಮಾಹಿತಿ ನೀಡಿರುವ ಶ್ರೀನಗರದಲ್ಲಿರುವ 15ನೇ ಕಾರ್ಪ್ಸ್‌ನ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಜನಲರ್ ಕೆ.ಜೆ.ಎಸ್.ಧಿಲ್ಲೊನ್ ಅವರು, 'ನಾವು ಬಾಲಕನ ದೇಹವನ್ನು ಮಧ್ಯಾಹ್ನ 12.40ರ ಸುಮಾರಿಗೆ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಿದೆವು. ಅವರು ಗುರುತು ಪರಿಶೀಲಿಸಿದ ನಂತರ ಸ್ವೀಕರಿಸಿದರು. ಪ್ರತಿಬಾರಿಯಂತೆ ಈ ಸಲ ನಾವು ಅಧಿಕೃತ ವಿನಿಮಯ ಠಾಣೆಯಿಂದ ಬಾಲಕನ ಶವ ಹಸ್ತಾಂತರಿಸಲಿಲ್ಲ. ಮಾನವೀಯತೆಯ ದೃಷ್ಟಿಯಿಂದ ಬಾಲಕನ ಶವವನ್ನು ಅದು ದೊರೆತ ಸ್ಥಳದ ಸಮೀಪವೇ ಪಾಕ್ ಸೇನೆಗೆ ಒಪ್ಪಿಸಲಾಯಿತು ಎಂದು ಹೇಳಿದ್ದಾರೆ. 
ಇನ್ನು ಭಾರತೀಯ ಸೇನೆಯ ಈ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಇಷ್ಟು ದಿನ ಭಾರತೀಯ ಸೇನೆಯ ದಾಳಿಗೆ ಹಿಡಿ ಶಾಪ ಹಾಕುತ್ತಿದ್ದ ಪಾಕಿಸ್ತಾನದ ಗಡಿ ಗ್ರಾಮದ ಸ್ಥಳೀಯರೇ ಭಾರತೀಯ ಸೇನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com