ಚೆನ್ನೈಗೆ ಬಂದ ನೀರಿನ ರೈಲು
ಚೆನ್ನೈಗೆ ಬಂದ ನೀರಿನ ರೈಲು

ನೀರಿನ ಕೊರತೆ ನೀಗಿಸಲು ಚೆನ್ನೈಗೆ ಬಂದ 'ಭಗೀರಥ' ರೈಲು, 25 ಲಕ್ಷ ಲೀಟರ್ ಕಾವೇರಿ ನೀರು!

ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ತಮಿಳನಾಡು ರಾಜಧಾನಿ ಚೆನ್ನೈಗೆ ಶುಕ್ರವಾರ 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ಮೊದಲ ರೈಲು ಆಗಮಿಸಿದೆ.
ಚೆನ್ನೈ: ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ತಮಿಳನಾಡು ರಾಜಧಾನಿ ಚೆನ್ನೈಗೆ ಶುಕ್ರವಾರ 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ಮೊದಲ ರೈಲು ಆಗಮಿಸಿದೆ.
ವೆಲ್ಲೂರು ಜಿಲ್ಲೆಯ ಜೋಲಾರ್‌ ಪೇಟೆಯಿಂದ ಬರೊಬ್ಬರಿ 25 ಲಕ್ಷ ಲೀಟರ್‌ ಕಾವೇರಿ ನೀರು ಹೊತ್ತ ಮೊದಲ ರೈಲು ಶುಕ್ರವಾರ ಮಧ್ಯಾಹ್ನ ವಿಲ್ಲಿವಾಕ್ಕಂ ರೈಲ್ವೆ ನಿಲ್ದಾಣ ತಲುಪಿದೆ. 
ಚೆನ್ನೈನಲ್ಲಿ ಎದುರಾಗಿರುವ ನೀರಿನ ತೀವ್ರ ಕೊರತೆಯನ್ನು ನಿರ್ವಹಿಸಲು ನಿತ್ಯ 1 ಕೋಟಿ ಲೀಟರ್‌ ನೀರು ಪೂರೈಸುವುದಾಗಿ ಈ ಹಿಂದೆ ತಮಿಳುನಾಡು ಸರ್ಕಾರ ಘೋಷಿಸಿತ್ತು. ಇದಕ್ಕಾಗಿ 68 ಕೋಟಿ ರೂ. ಅನುದಾನ ಮೀಸಲಿರಿಸಿತ್ತು. ಇದೀಗ ಈ ಯೋಜನೆಯ ಭಾಗವಾಗಿ ಚೆನ್ನೈಗೆ ಮೊದಲ ನೀರಿನ ರೈಲು ಆಗಮಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, 'ವಿಶೇಷವಾಗಿ ರೂಪಿಸಲಾಗಿರುವ ವ್ಯಾಗನ್‌(ನೀರು ಸಂಗ್ರಹಿಸಿಕೊಳ್ಳುವ ರೈಲು) ಮೂಲಕ ತರಲಾಗುವ ಕಾವೇರಿ ನೀರು, ಚೆನ್ನೈ ನಗರದ ಜನರ ನೀರಿನ ದಾಹ ತಣಿಸಲಿದೆ. ವ್ಯಾಗನ್‌ಗಳನ್ನು ಒಳಗೊಂಡ ಎರಡು ರೈಲು ಗಾಡಿಗಳು ನಿತ್ಯ ನಾಲ್ಕು ಬಾರಿ ನೀರು ತರಲಿವೆ. ತಲಾ 50,000 ಲೀಟರ್‌ ಸಾಮರ್ಥ್ಯದ, 50 ಟ್ಯಾಂಕ್‌ ವ್ಯಾಗನ್‌ಗಳ ಮೂಲಕ ರೈಲಿನಲ್ಲಿ ನೀರು ಸಾಗಿಸಲಾಗುತ್ತದೆ. ಹೀಗೆ ಸಾಗಿಸಲಾದ ನೀರನ್ನು ವ್ಯಾಗನ್‌ಗಳಿಂದ ಶುದ್ಧೀಕರಣ ಘಟಕಕ್ಕೆ ಪೈಪ್ ಗಳನ್ನು ಅಳವಡಿಸಿ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಮೂಲಗಳ ಪ್ರಕಾರ ಈ ರೈಲು ದಿನಕ್ಕೆ 1 ಕೋಟಿ ಲೀಟರ್ ನಂತೆ ಆರು ತಿಂಗಳ ವರೆಗೂ ಚೆನ್ನೈಗೆ ತಲುಪಿಸಲಿದೆ. ಜೋಲಾರ್ ಪೇಟೆಯಿಂದ ಸುಮಾರು 215 ಕಿ.ಮೀ. ದೂರ ಸಂಚಾರ ಮಾಡಿ ಮಧ್ಯಾಹ್ನ 12ರ ವೇಳೆಗೆ ಚೆನ್ನೈ ವಿಲ್ಲಿವಾಕ್ಕಂ ರೈಲ್ವೆ ನಿಲ್ದಾಣ ತಲುಪಿತು.  
ಅತ್ತ ರೈಲಿನಿಂದ ನೀರು ಪಂಪಿಂಗ್ ಸ್ಟೇಷನ್ ಗೆ ತಲುಪುತ್ತಿದ್ದಂತೆಯೇ ಇತ್ತ ಚೆನ್ನೈನಾದ್ಯಂತ ವಾಟರ್ ಟ್ಯಾಂಕರ್ ಗಳ ಸಮೀಪ ನೆರೆದಿದ್ದ ಜನ ಸರತಿ ಸಾಲಲ್ಲಿ ನಿಂತು ನೀರನ್ನು ಸಂಗ್ರಹಿಸಿಕೊಂಡು ಮನೆಗೆ ತೆರಳಿದರು.

Related Stories

No stories found.

Advertisement

X
Kannada Prabha
www.kannadaprabha.com