ಅಸ್ಸಾಂ ಪ್ರವಾಹ: 7 ಸಾವು, ಪ್ರವಾಹ ಪೀಡಿತರ ಸಂಖ್ಯೆ 14 ಲಕ್ಷಕ್ಕೆ ಏರಿಕೆ

ಅಸ್ಸಾಂನಲ್ಲಿ ಸುರಿಯುತ್ತಿರುವ ಬಾರಿ ಪರಿಣಾಮ ಉಂಟಾಗಿರುವ ಪ್ರವಾಹ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರವಾಹದಿಂದ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಕ್ಸಾ: ಅಸ್ಸಾಂನಲ್ಲಿ ಸುರಿಯುತ್ತಿರುವ ಬಾರಿ ಪರಿಣಾಮ ಉಂಟಾಗಿರುವ ಪ್ರವಾಹ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರವಾಹದಿಂದ ಸಂಭವಿಸಿದ ವಿವಿಧ ಪ್ರಕರಣಗಳಲ್ಲಿ 7 ಮಂದಿ ಸಾವಿಗೀಡಾಗಿದ್ದಾರೆ.
ವ್ಯಾಪಕ ಮಳೆ ಪರಿಣಾಮ ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಸುಮಾರು 14ಕ್ಕೂ ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಸೋನಿತ್‌ಪುರ, ದಾರಂಗ್, ಬಕ್ಸಾ, ಬಾರ್‌ಪೆಟಾ, ನಲ್ಬಾರಿ, ಚಿರಾಂಗ್, ಬೊಂಗೈಗಾಂವ್, ಕೊಕ್ರಜಾರ್, ಧುಬ್ರಿ, ಗೋಲ್‌ಪರಾ, ಕಮ್ರೂಪ್, ಮೊರಿಗಾಂವ್, ಹೊಜೈ, ನಾಗಾನ್, ಗೋಲಘಾಟ್, ಮಜುಲಿ, ಕಾರ್ಜುರ್, ಆಂಗ್ಲಾಂಗ್ ಜಿಲ್ಲೆಗಳು ಪ್ರವಾಹದಿಂದಾಗಿ ಜಲಾವೃತ್ತವಾಗಿದೆ.
ಪ್ರಸ್ತುತ ಪ್ರವಾಹ ಪೀಡಿತ 21 ಜಿಲ್ಲೆಗಳಲ್ಲಿ 234 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 20 ಸಾವಿರಕ್ಕೂ ಅಧಿಕ ಮಂದಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಏತನ್ಮಧ್ಯೆ, ಭಾರತೀಯ ಸೇನೆ, ಎಸ್‌ಡಿಆರ್‌ಎಫ್ ಮತ್ತು ಸಿವಿಲ್ ಅಡ್ಮಿನಿಸ್ಟ್ರೇಷನ್ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ರಾಜ್ಯದ ಬಕ್ಸಾ ಜಿಲ್ಲೆಯ ಬಾಲಿಪುರ್ ಚಾರ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಸುಮಾರು 150 ಗ್ರಾಮಸ್ಥರನ್ನು ರಕ್ಷಿಸಿ ಸ್ಥಳಾಂತರಿಸಿದೆ. ಇವರಲ್ಲಿ 55 ಮಹಿಳೆಯರು, 40 ಪುರುಷರು, 25 ಹಿರಿಯ ನಾಗರಿಕರು ಮತ್ತು 30 ಮಕ್ಕಳು ಸೇರಿದ್ದಾರೆ. 
ಕಾಜಿರಂಗಾ ಉದ್ಯಾನವನ ಕೂಡ ಜಲಾವೃತ್ತ
ಇನ್ನು ಮಳೆಯಿಂದಾಗಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಮತ್ತು ಅದರ 95 ಶಿಬಿರಗಳು ಶೇ.70 ರಷ್ಟು ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಅರಣ್ಯ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದ್ದು ಕರ್ತವ್ಯದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ಉದ್ಯಾನವನದ ಮುಕ್ಕಾಲು ಭಾಗ ಜಲಾವೃತಗೊಂಡಿರುವ ಕಾರಣ ಪ್ರಾಣಿಗಳನ್ನು ಎತ್ತರದ ಪ್ರದೇಶಗಳಿಗೆ ಕರೆದೊಯ್ಯಲಾಗಿದ್ದು, ಬೇಟೆಗಾರರು ಪ್ರಾಣಿಗಳ ಬೇಟೆಯನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಅರಣ್ಯ ಇಲಾಖೆ ಸಂಪೂರ್ಣ ಎಚ್ಚರಿಕೆ ವಹಿಸಿದೆ. ರಾತ್ರಿ ವೇಳೆಯೂ ಸಹ ಅರಣ್ಯ ಕಾವಲುಗಾರರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com