
ದೆಹಲಿಯಲ್ಲಿ ಇಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ
Source : PTI
ನವದೆಹಲಿ: ತಮ್ಮ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿ ಅದನ್ನು ಬೆಳೆಸುವತ್ತ ಗಮನಹರಿಸಿ. ಕುಷ್ಟರೋಗ ಅಥವಾ ಕ್ಷಯರೋಗ ನಿರ್ಮೂಲನೆಯಂತಹ ಮಾನವ ಸೂಕ್ಷ್ಮ ಕೆಲಸಗಳನ್ನು ಕೈಗೆತ್ತಿಕೊಳ್ಳಿ ಎಂದು ಬಿಜೆಪಿ ಸಂಸದರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಲಹೆ ನೀಡಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಯಾವತ್ತಿಗೂ ಮೊದಲ ಅನಿಸಿಕೆ ಸಾಮಾನ್ಯವಾಗಿ ಕೊನೆಯ ಅನಿಸಿಕೆಯಾಗುತ್ತದೆ, ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸಂಸದರು ಉತ್ಸಾಹದಿಂದ ಕೆಲಸ ಮಾಡುವಂತೆ ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಸಂಸದರಿಗೆ ಕಿವಿಮಾತು ಹೇಳಿದರು.
ಸಂಸತ್ತು ಕಲಾಪಗಳಲ್ಲಿ ಸಂಸದರು ಕಡ್ಡಾಯವಾಗಿ ಹಾಜರಿರಬೇಕು, ಸಚಿವರು ಕಡ್ಡಾಯವಾಗಿ ಕಚೇರಿಯಲ್ಲಿ ನಿಗದಿತ ಸಮಯಕ್ಕೆ ಹಾಜರಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಈ ಹಿಂದೆ ಪ್ರಧಾನಿ ತಾಕೀತು ಮಾಡಿದ್ದರು.
ಅದನ್ನು ಇಂದಿನ ಸಭೆಯಲ್ಲಿ ಮತ್ತೆ ಪ್ರಸ್ತಾಪಿಸಿದ ಪ್ರಧಾನಿ, ಕೇಂದ್ರ ಸಚಿವರುಗಳು ಸಂಸತ್ತಿನ ಕಾರ್ಯಕ್ರಮ ಪಟ್ಟಿಯಲ್ಲಿರುವ ನಿಗದಿತ ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಸರ್ಕಾರದ ಪ್ರತಿನಿಧಿಯಾಗಿ ಕಲಾಪದ ವೇಳೆ ಸದನದಲ್ಲಿ ಹಾಜರಿರಬೇಕು ಮತ್ತು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಮೊದಲೇ ತಿಳಿಸಬೇಕೆಂದು ಹೇಳಿದ್ದಾರೆ.
ಸಂಸತ್ತು ಕಲಾಪಕ್ಕೆ ಹಾಜರಾಗುವುದು ಕೇವಲ ಸಂಸದರ ಕೆಲಸ ಮಾತ್ರವಲ್ಲ, ಅದು ಸಚಿವರುಗಳಿಗೂ ಅನ್ವಯವಾಗುತ್ತದೆ ಎಂದು ಇಂದಿನ ಸಭೆಯಲ್ಲಿ ಪ್ರಧಾನಿ ಒತ್ತಿ ಹೇಳಿದ್ದಾರೆ.
ಸಂಸದರು ತಮ್ಮ ಕ್ಷೇತ್ರಗಳಲ್ಲಿ ನಿಗದಿತ ಎಂದಿನ ಕಾರ್ಯಗಳಲ್ಲದೆ ಸಾಮಾಜಿಕ ಕಳಕಳಿಯ ಮತ್ತು ಮಾನವ ಸಂವೇದಿ ಕೆಲಸಗಳನ್ನು ಕೈಗೆತ್ತಿಕೊಂಡು ಕೆಲಸ ಮಾಡಬೇಕು. ಭಾರತದ ಪಿತಾಮಹ ಮಹಾತ್ಮಾ ಗಾಂಧಿಯವರಿಗೆ ಕ್ಷಯರೋಗ, ಕುಷ್ಠರೋಗದಂತಹ ಸಮಸ್ಯೆಗಳ ನಿರ್ಮೂಲನೆಗೆ ಕೆಲಸ ಮಾಡಲು ಹೇಗೆ ಪ್ರೇರೇಪಿಸಿತು ಎಂಬ ಬಗ್ಗೆ ಮೋದಿ ಸಭೆಯಲ್ಲಿ ಮಾತನಾಡಿದರು.
2025ರಲ್ಲಿ ಭಾರತದಿಂದ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಭಾರತ ಸಮಯ ನಿಗದಿಪಡಿಸಿದರೆ, ಜಾಗತಿಕ ಮಟ್ಟದಲ್ಲಿ 2030ಕ್ಕೆ ನಿಗದಿಪಡಿಸಲಾಗಿದ್ದು ಎಲ್ಲಾ ಸಂಸದರು ಅದರ ನಿರ್ಮೂಲನೆಗೆ ಶ್ರಮಿಸಬೇಕು ಎಂದರು.ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಮತ್ತು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಸಂಸದರು ಸ್ಥಳೀಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುವಂತೆ ಮೋದಿ ಸಲಹೆ ನೀಡಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now