ಎಂಸಿಐ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ಕೇಂದ್ರ ಸಂಪುಟ ಅಸ್ತು

ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಯನ್ನು ರದ್ದುಗೊಳಿಸಿ ಅದರ ಜಾಗದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆ ಮಾಡುವ ಹೊಸ...
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್
ನವದೆಹಲಿ: ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಯನ್ನು ರದ್ದುಗೊಳಿಸಿ ಅದರ ಜಾಗದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆ ಮಾಡುವ ಹೊಸ ಕ್ರಮಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತ ಕರಡು ಕಾನೂನಿಗೆ ಒಪ್ಪಿಗೆ ನೀಡಲಾಗಿದೆ.
ಉದ್ದೇಶಿತ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆ, 2019, ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ, 1956 ಅನ್ನು ರದ್ದುಗೊಳಿಸುವ ಪ್ರಸ್ತಾಪ ಹೊಂದಿದೆ.
ಉದ್ದೇಶಿತ ಆಯೋಗವು ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಶುಲ್ಕಮತ್ತು ಶೇ. 50 ಸೀಟುಗಳನ್ನು ನಿಯಂತ್ರಿಸಲಿದೆ ಎಂದು ಸಂಪುಟ ಸಭೆಯ ನಂತರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಈ ಮಸೂದೆಯಲ್ಲಿ ಎಂಬಿಬಿಎಸ್ ಕೊನೆಯ ವರ್ಷದ ಪರೀಕ್ಷೆಯನ್ನು ಸಾಮಾನ್ಯ ಎಕ್ಸಿಟ್ ಪರೀಕ್ಷೆ (ನೆಕ್ಸ್ಟ್ ) ಎಂದು ಪರಿಗಣಿಸುವ ಪ್ರಸ್ತಾವನೆ ಹೊಂದಿದೆ. ಏಮ್ಸ್ ನಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ಪ್ರವೇಶಕ್ಕೆ ಅರ್ಹತೆ ಪಡೆಯಲೂ ಅನ್ವಯವಾಗುವಂತೆ, ದೇಶದಲ್ಲಿ ಸಾಮಾನ್ಯ ನೀಟ್ ಪರೀಕ್ಷೆ ಮತ್ತು ನೆಕ್ಸ್ಟ್ ಪರೀಕ್ಷೆ ನಡೆಸಲು ಇದು ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಈ ಹೊಸ ಕ್ರಮಗಳು ಪಾರದರ್ಶಕ ಪ್ರವೇಶ ಪ್ರಕ್ರಿಯೆಯನ್ನು ಖಚಿತಪಡಿಸುವುದರ ಜೊತೆಗೆ ಪ್ರವೇಶ ಶುಲ್ಕವನ್ನು ತಗ್ಗಿಸಲಿವೆ. ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com