ಜಾಧವ್ ಪ್ರಕರಣ: ಐಸಿಜೆ ತೀರ್ಪು ಭಾರತದ ನಿಲುವು ಎತ್ತಿ ಹಿಡಿದಿದೆ - ವಿದೇಶಾಂಗ ಸಚಿವಾಲಯ

ಗೂಢಚಾರಿಕೆ ಹಾಗೂ ಭಯೋತ್ಪಾದನೆಯ ಆರೋಪದ ಮೇಲೆ ಪಾಕಿಸ್ತಾನದ ಸೆರೆಯಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಕುಲಭೂಷಣ್ ಜಾಧವ್...
ರವೀಶ್ ಕುಮಾರ್
ರವೀಶ್ ಕುಮಾರ್
ನವದೆಹಲಿ: ಗೂಢಚಾರಿಕೆ ಹಾಗೂ ಭಯೋತ್ಪಾದನೆಯ ಆರೋಪದ ಮೇಲೆ ಪಾಕಿಸ್ತಾನದ ಸೆರೆಯಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪು ಭಾರತದ ಪರವಾಗಿದ್ದು, ಅದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ತೀರ್ಪನ್ನು ಬೇರೆಯೇ ರೀತಿ ಬಿಂಬಿಸುತ್ತಿದೆ ಎಂದಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನ ಬೇರೆ ಯಾವುದೋ ತೀರ್ಪನ್ನು ಓದುತ್ತಿರಬೇಕು. ಮುಖ್ಯವಾದ ತೀರ್ಪು , ತೀರ್ಪಿನ ಪ್ರತಿಯು 42ನೇ ಪುಟದಲ್ಲಿದೆ. ಪಾಕಿಸ್ತಾನಕ್ಕೆ 42 ನೇ ಪುಟವನ್ನು ಹುಡುಕಿ ಓದುವ ತಾಳ್ಮೆಯಿರದಿದ್ದರೆ, ಅವರು 7 ಪುಟಗಳ ಪತ್ರಿಕಾ ಪ್ರಕಟಣೆಯನ್ನು ಓದಲಿ. ಅದರಲ್ಲಿ ಪ್ರತಿಯೊಂದು ವಾಕ್ಯವೂ ಭಾರತದ ಪರವಾಗಿದೆ ಮತ್ತು ಭಾರತದ ನಿಲುವನ್ನು ಅಂತರಾಷ್ಟ್ರೀಯ ಕೋರ್ಟ್ ಸಂಪೂರ್ಣ ಎತ್ತಿ ಹಿಡಿದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನ್ಯಾಯಾಲಯದ ತೀರ್ಪು ಭಾರತದ ನಿಲುವನ್ನು ಸಮರ್ಥಿಸಿದೆ ಎಂದ ಅವರು, ಪಾಕಿಸ್ತಾನಕ್ಕೆ ವಿಯೆನ್ನಾ ಒಪ್ಪಂದದ ಅನುಸಾರ ನಡೆದುಕೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದರು. 
ನಿನ್ನೆಯಷ್ಟೇ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ದಿ ಹೇಗ್ ನ ಅಂತಾರಾಷ್ಟ್ರೀಯ ನ್ಯಾಯಾಲಯ ಅಮಾನತುಗೊಳಿಸಿತ್ತು. ಅಲ್ಲದೆ ಜಾಧವ್ ರಾಜತಾಂತ್ರಿಕ ನೆರವು ನೀಡಬೇಕು ಎಂದು ಪಾಕಿಸ್ತಾನಕ್ಕೆ ಸೂಚಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು, ಜಾಧವ್ ಅವರನ್ನು ಖುಲಾಸೆಗೊಳಿಸದ ಮತ್ತು ಅವರನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಕಳುಹಿಸುವಂತೆ ಸೂಚಿಸದ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com